ವಿಶ್ವಕ್ಕೆ ಹೊಸ ವೈರಸ್ ಭೀತಿ: 12 ದೇಶಗಳಲ್ಲಿ 92 ಮಂಕಿಪಾಕ್ಸ್ ಪ್ರಕರಣ
ಜಿನೀವಾ: ಕಳೆದ ಹತ್ತು ದಿನಗಳಲ್ಲಿ 12 ದೇಶಗಳಿಂದ 92 ವ್ಯಾಪಕ ಸಾಂಕ್ರಾಮಿಕವಲ್ಲದ ಮಂಕಿಪೋಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದು ಹೆಚ್ಚುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಎಚ್ಚರಿಸಿದೆ.
"ಮಂಕಿಪಾಕ್ಸ್ ವೈರಸ್ ಸೋಂಕು ಉಲ್ಬಣಿಸುವ ಪರಿಸ್ಥಿತಿ ಕಾಣಿಸುತ್ತಿದೆ. ಸಾಂಕ್ರಾಮಿಕ ಇಲ್ಲದ ಪ್ರದೇಶಗಳಲ್ಲಿ ಸರ್ವೇಕ್ಷಣೆ ಹೆಚ್ಚಿಸಿದಾಗ ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಪ್ರಸರಣ ತಡೆಯುವ ನಿಟ್ಟಿನಲ್ಲಿ ಈ ಸೋಂಕಿನ ಅಪಾಯ ಸಾಧ್ಯತೆ ಅಧಿಕ ಇರುವ ಜನರಿಗೆ ನಿಖರವಾದ ಮಾಹಿತಿಯನ್ನು ನೀಡುವ ಅಗತ್ಯವಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಮಾಡಿದೆ.
ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ಕನಿಷ್ಠ ಒಂಬತ್ತು ದೇಶಗಳಲ್ಲಿ ಈ ರೋಗ ಪ್ರಕರಣಗಳು ಪತ್ತೆಯಾಗಿವೆ. ಈ ವೈರಸ್ ಸೋಂಕು ಮೊದಲ ಬಾರಿಗೆ ಮಂಗಗಳಲ್ಲಿ ಕಾಣಿಸಿಕೊಂಡಿದ್ದರಿಂದ ಇದಕ್ಕ ಮಂಕಿಪಾಕ್ಸ್ ಎಂದು ಹೆಸರಿಸಲಾಗಿದೆ. ಇದುವರೆಗೆ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ.
ಯೂರೋಪ್‌ನ ಪೋರ್ಚ್‌ಗಲ್, ಸ್ಪೇನ್ ಮತ್ತು ಬ್ರಿಟನ್ ಅತ್ಯಧಿಕ ಬಾಧಿತವಾಗಿರುವ ದೇಶಗಳು. ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ನೆದರ್ಲೆಂಡ್ಸ್, ಇಟೆಲಿ ಮತ್ತು ಸ್ವೀಡನ್ ಪ್ರಕರಣ ಪತ್ತೆಯಾಗಿರುವ ಇತರ ದೇಶಗಳು. ಲೈಂಗಿಕ ಆರೋಗ್ಯ ಕ್ಲಿನಿಕ್‌ನಿಂದ ದೊಡ್ಡ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ. "ಸದ್ಯ ಲಭ್ಯವಿರುವ ಮಾಹಿತಿಯಂತೆ, ಹೆಚ್ಚಿನ ಪ್ರಕರಣಗಳು ಲೈಂಗಿಕ ಆರೋಗ್ಯ ಕ್ಲಿನಿಕ್‌ಗಳಿಗೆ ತಪಾಸಣೆಗೆ ಬರುವ ಸಲಿಂಗಕಾಮಿ ಪುರುಷರಲ್ಲಿ ಕಂಡುಬರುತ್ತಿವೆ" ಎಂದು ಡಬ್ಲ್ಯುಎಚ್‌ಓ ಹೇಳಿದೆ.
ವೈರಸ್ ಸೋಂಕಿನ 28 ಶಂಕಿತ ಪ್ರಕರಣಗಳು ವರದಿಯಾಗಿವೆ. ಸೋಂಕಿತ ಪ್ರದೇಶಗಳ ಜತೆ ನೇರವಾದ ಪ್ರಯಾಣ ಸಂಪರ್ಕ ಇಲ್ಲದ ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ನಿಜಕ್ಕೂ ಅಚ್ಚರಿದಾಯಕ. ಈ ಹಿನ್ನೆಲೆಯಲ್ಲಿ ಸೋಂಕಿತವಲ್ಲದ ಪ್ರದೇಶಗಳಲ್ಲೂ ಆರೋಗ್ಯ ಸಮೀಕ್ಷೆ ಹೆಚ್ಚಿಸಲಾಗುತ್ತಿದೆ ಎಂದು ಅದು ಹೇಳಿದೆ.
ಇದುವರೆಗೆ ಈ ಸೋಂಕು ಆಫ್ರಿಕಾಗೆ ಸೀಮಿತವಾಗಿದೆ. ಬೆನಿನ್, ಕ್ಯಾಮರೂನ್, ಕೇಂದ್ರ ಆಫ್ರಿಕಾ, ಕಾಂಗೊ, ಗಬಾನ್, ಘಾನಾ, ಐವರಿಕೋಸ್ಟ್, ಲೈಬೀರಿಯಾ, ನೈಜೀರಿಯಾ, ಸೆರೆ ಲಿಯಾನ್ ಮತ್ತು ದಕ್ಷಿಣ ಸೂಡಾನ್‌ಗಳಲ್ಲಿ ಮೊದಲ ಬಾರಿಗೆ ಈ ಸೋಂಕು ಕಾಣಿಸಿಕೊಂಡಿತ್ತು.