ಬೆಂಗಳೂರು | ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಫ್ಲೈಓವರ್ ನಿಂದ ಬಿದ್ದು ವ್ಯಕ್ತಿ ಮೃತ್ಯು, ಬಾಲಕ ಗಂಭೀರ
ಸಂಬಂಧಿ ಬಾಲಕನಿಗೆ ಏರೋಡ್ರಮ್ ತೋರಿಸುತ್ತಿದ್ದ ವೇಳೆ ಘಟನೆ

ಬೆಂಗಳೂರು, ಮೇ 22: ಫ್ಲೈ ಓವರ್ ಮೇಲೆ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಫ್ಲೈಓವರ್ ನಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಜಕ್ಕೂರು ಏರೋಡ್ರಮ್ ಬಳಿ ರವಿವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ 11 ವರ್ಷದ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮೃತರನ್ನು ಬೆಂಗಳೂರು ಮೂಲದ ಗೋವಿಂದಪ್ಪ(45) ಎಂದು ಗುರುತಿಸಲಾಗಿದೆ. ಅವರ ಸಂಬಂಧಿಕ ಸಂಜಯ್(11) ಗಂಭೀರವಾಗಿ ಗಾಯಗೊಂಡಿದ್ದಾನೆ.
ಗೋವಿಂದಪ್ಪರ ಮನೆಗೆ ಅವರ ತಂಗಿಯ ಮಗನಾಗಿರುವ ಸಂಜಯ್ ಬಂದಿದ್ದ. ಆತನಿಗೆ ಜಕ್ಕೂರು ಏರೋಡ್ರಮ್ ತೋರಿಸಲೆಂದು ಗೋವಿಂದಪ್ಪ ತನ್ನ ಮೋಪೆಡ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಅದರಂತೆ ಏರ್ ಪೋರ್ಟ್ ಫ್ಲೈಓವರ್ ಮೇಲೆ ಮೋಪೆಡ್ ನಿಲ್ಲಿಸಿ ಏರೋಡ್ರಮ್ ವೀಕ್ಷಿಸುತ್ತಿದ್ದ ವೇಳೆ ಅತೀ ವೇಗವಾಗಿ ಬಂದ ಕಾರೊಂದು ಇವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಗೋವಿಂದಪ್ಪ ಫ್ಲೈಓವರ್ ನಿಂದ ಕೆಳಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸಂಜಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಕಾರು ಚಾಲಕ ವರುಣ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.





