ಗುರುರಾಜ್ ಸನಿಲ್‌ರ ‘ವಿವಶ’, ‘ಆವರ್ತನ’ ಕಾದಂಬರಿಗಳ ಬಿಡುಗಡೆ

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಹಯೋಗದಲ್ಲಿ ಉರಗ ತಜ್ಞ, ಲೇಖಕ ಗುರುರಾಜ್ ಸನಿಲ್ ಅವರ ‘ವಿವಶ’ ಮತ್ತು ‘ಆವರ್ತನ’ ಅವಳಿ ಕಾದಂಬರಿಗಳ ಬಿಡುಗಡೆ ಸಮಾರಂಭವು ಉಡುಪಿ ಎಂಜಿಎಂ ಕಾಲೇಜು ಆವರಣದ ಧ್ವನ್ಯಾಲೋಕದಲ್ಲಿ ರವಿವಾರ ಜರಗಿತು.
ಕನ್ನಡ ಸಾಹಿತ್ಯ ಪರಿಷತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ‘ವಿವಶ’ ಪುಸ್ತಕವನ್ನು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಜಗದೀಶ್ ಶೆಟ್ಟಿ ‘ಆವರ್ತನ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ಯನ್ನು ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ವಹಿಸಿದ್ದರು.
ವಿವಶ ಕೃತಿಯನ್ನು ಪರಿಚಯಿಸಿದ ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು, ಧರ್ಮ ಮತ್ತು ಮನುಷ್ಯನ ಸಂಬಂಧ, ಮನುಷ್ಯನ ಅಜ್ಞಾನ, ದುಶ್ಚಟಗಳು, ಕಾಮ, ಪ್ರೇಮದ ನಡುವಿನ ರೇಖೆಯನ್ನು ಸೊಗಸಾಗಿ ವಿಶ್ಲೇಷಣೆ ಗೊಳಪಡಿಸಿದ್ದಾರೆ. ಮನುಷ್ಯ ಸಂಬಂಧಗಳ ವೈರುಧ್ಯಗಳನ್ನು ಚಿತ್ರಿಸಿದ ಬಗೆ ಚಿಂತನೆಗೆ ಹಚ್ಚುವ ಈ ಕೃತಿ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವರಿಗೆ ಸೂಕ್ತವಾಗಿದೆ ಎಂದರು.
‘ಆವರ್ತನ’ ಕೃತಿಯನ್ನು ಪರಿಚಯಿಸಿದ ಸಾಹಿತಿ ಅನಿತಾ ಪಿ. ತಾಕೋಡೆ , ಜನರ ಆಸೆ, ಆಕಾಂಕ್ಷೆ, ಹಂಬಲ ಗಳನ್ನು ತೋರಿಸುವ ಅನಗತ್ಯ ವಿವರಣೆ ಇಲ್ಲದೆ ಓದಿಸಿಕೊಂಡು ಹೋಗುವ ಕಾದಂಬರಿ ಇದಾಗಿದೆ. ಓದುಗರು ಪಾತ್ರದೊಳಗೆ ಲೀನರಾಗುವಂತೆ ಪಾತ್ರಗಳನ್ನು ಕಟ್ಟಿಕೊಟ್ಟಿರುವ ರೀತಿ ಸೊಗಸಾಗಿದೆ ಎಂದು ಹೇಳಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಧ್ಯಕ್ಷ ವಿಶ್ವನಾಥ್ ಶೆಣೈ, ಲೇಖಕ ಗುರುರಾಜ್ ಸನಿಲ್, ಕಸಾಪ. ಗೌರವ ಕಾರ್ಯದರ್ಶಿ ರಂಜನಿ ವಸಂತಿ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಪೂರ್ಣಿಮ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.







