"ಇತಿಹಾಸದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ": ಸದ್ಗುರು ಜಗ್ಗಿ ವಾಸುದೇವ್
"ಮಂದಿರ ಮಸೀದಿ ವಿಷಯಗಳನ್ನು ವಿವಾದವನ್ನಾಗಿ ಮಾಡಬೇಡಿ"

ಹೊಸದಿಲ್ಲಿ: ಮಂದಿರ ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಬಗ್ಗೆ ಇತ್ತೀಚೆಗೆ ಚರ್ಚೆಗಳು ಹೆಚ್ಚಾಗುತ್ತಿರುವ ನಡುವೆಯೇ ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಇಂತಹ ಚರ್ಚೆಗಳು ವ್ಯರ್ಥ ಎಂದು ಹೇಳಿದ್ದಾರೆ.
ಇಂಡಿಯಾ ಟುಡೇ ವಾರ್ತಾ ಸಂಚಾಲಕ ರಾಹುಲ್ ಕನ್ವಾಲ್ ಅವರೊಂದಿಗೆ ಮಾತನಾಡಿದ ಸದ್ಗುರು, ಇತಿಹಾಸವನ್ನು ಪುನಃ ಬರೆಯಲು ಸಾಧ್ಯವಿಲ್ಲ, ಆಕ್ರಮಣಗಳ ಸಂದರ್ಭದಲ್ಲಿ ನೆಲಸಮವಾದ ಸಾವಿರಾರು ದೇವಾಲಯಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.
"ಆಕ್ರಮಣಗಳ ಸಮಯದಲ್ಲಿ ಸಾವಿರಾರು ದೇವಾಲಯಗಳು ನಾಶವಾದವು. ಆಗ ನಮಗೆ ಅವುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇತಿಹಾಸವನ್ನು ಮರಳಿ ಬರೆಯಲು ಸಾಧ್ಯವಿಲ್ಲದ ಕಾರಣ ಅವುಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ" ಎಂದು ಹೇಳಿದ್ದಾರೆ.
ಒಂದೊಂದು ಸ್ಥಳಗಳ ಬಗ್ಗೆಯೂ ಚರ್ಚಿಸಿ ಸಮುದಾಯಗಳ ನಡುವಿನ ವಿವಾದ ಮತ್ತು ಅನಗತ್ಯ ದ್ವೇಷವನ್ನು ಜೀವಂತವಾಗಿರಿಸಿಕೊಳ್ಳುವ ಬದಲು, ಎರಡು ಸಮುದಾಯಗಳು [ಹಿಂದೂಗಳು ಮತ್ತು ಮುಸ್ಲಿಮರು] ಒಟ್ಟಿಗೆ ಕುಳಿತು ಪ್ರಮುಖವಾದ ಎರಡು-ಮೂರು ಸ್ಥಳಗಳ ಬಗ್ಗೆ ಮಾತನಾಡಿ ಅದನ್ನು ಇತ್ಯರ್ಥಪಡಿಸಬೇಕು. ಕೆಲವು ಕೊಡುಕೊಳ್ಳುವಿಕೆ ಇರಬೇಕು, ಅದು ರಾಷ್ಟ್ರದ ಮುಂದಿರುವ ದಾರಿ. ನಾವು ಹಿಂದೂ ಮತ್ತು ಮುಸ್ಲಿಂ ಸಮುದಾಯವಾಗಿ ಯೋಚಿಸಬಾರದು ಎಂದು ಸದ್ಗುರು ಹೇಳಿದ್ದಾರೆ.
ಅದಾಗ್ಯೂ, ನಿರ್ದಿಷ್ಟವಾಗಿ ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಹೇಳಿಕೆ ನೀಡಲು ಸದ್ಗುರು ನಿರಾಕರಿಸಿದ್ದಾರೆ.
ಮಂದಿರ ಮಸೀದಿ ವಿಷಯಗಳನ್ನು ವಿವಾದವನ್ನಾಗಿ ಮಾಡಬೇಡಿ:
ಈ ಹಂತದಲ್ಲಿ ಭಾರತವು ನಿರ್ಣಾಯಕ ಘಟ್ಟದಲ್ಲಿದೆ, ನಾವು ಒಂದು ಹಂತದಲ್ಲಿ ಸರಿಯಾಗಿ ಕೆಲಸ ಮಾಡಿದರೆ, ಭಾರತವು ವಿಶ್ವದಲ್ಲಿ ಮಹತ್ವದ ಶಕ್ತಿಯಾಗಬಹುದು. ಹೀಗಿರುವಾಗ ಪ್ರತಿ ವಿವಾದವನ್ನೂ ದೊಡ್ಡದು ಮಾಡಿ ವ್ಯರ್ಥ ಮಾಡಬಾರದು. ಇಂತಹ ಮಂದಿರ-ಮಸೀದಿ ವಿಷಯಗಳನ್ನು ವಿವಾದಾಸ್ಪದವಾಗಿಸುವ ಬದಲು ಪರಿಹರಿಸುವಂತೆ ನಾನು ಜನರು ಮತ್ತು ಸುದ್ದಿ ಸಂಸ್ಥೆಗಳಿಗೆ ಕೇಳಿಕೊಳ್ಳುತ್ತೇನೆ ಎಂದು ಸದ್ಗುರು ಹೇಳಿದ್ದಾರೆ.
I think for iconic places, communities should sit and talk and find a solution once and for all: @SadhguruJV to @rahulkanwal.#Davos #WEF22 #WorldEconomicForum #GyanvapiMosquerow pic.twitter.com/x0r5ayrqGr
— IndiaToday (@IndiaToday) May 22, 2022