ವಿದ್ಯಾರ್ಥಿಗಳು ಆಯೋಜಿಸಿದ್ದ ಸಾಹಿತ್ಯೋತ್ಸವವನ್ನು ರದ್ದುಗೊಳಿಸಿದ ಅಲಿಗಢ ಮುಸ್ಲಿಂ ಯುನಿವರ್ಸಿಟಿ ಅಧಿಕಾರಿಗಳು
"ವಿಶ್ವವಿದ್ಯಾನಿಲಯಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳನ್ನು ಸರ್ಕಾರ ಬಯಸುವುದಿಲ್ಲ": ವಿದ್ಯಾರ್ಥಿಗಳ ಆರೋಪ

ಹೊಸದಿಲ್ಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು) ಅಧಿಕಾರಿಗಳು ವಿದ್ಯಾರ್ಥಿಗಳು ಆಯೋಜಿಸಿದ್ದ ಮೂರು ದಿನಗಳ ಸಾಹಿತ್ಯೋತ್ಸವದ ಕಲಾಪವನ್ನು ರದ್ದುಗೊಳಿಸಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳನ್ನು ಸರ್ಕಾರ ಬಯಸುವುದಿಲ್ಲ, ಹಾಗಾಗಿ, ವಿವಿ ಆಡಳಿತಕ್ಕೆ ಕಾರ್ಯಕ್ರಮ ರದ್ದುಗೊಳಿಸುವ ಒತ್ತಡ ಇತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೇ 20 ರಂದು ಪ್ರಾರಂಭವಾದ ಕಾರ್ಯಕ್ರಮವನ್ನು "ಅನಿವಾರ್ಯ" ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ ಎಂದು ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ twocircles.net ವರದಿ ಮಾಡಿದೆ.
ಶನಿವಾರ ಕೂಡಾ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದ್ದು, ಆದರೆ ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ, ಕಾರ್ಯಕ್ರಮಕ್ಕೆ ಅನುಮತಿ ನೀಡಲಾಯಿತು. ಜನದಟ್ಟಣೆಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಶನಿವಾರ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ವಿದ್ಯಾರ್ಥಿ ನಾಯಕ ಸಾಜಿದ್ ಬುಖಾರಿ TwoCircles.net ಗೆ ತಿಳಿಸಿದ್ದಾರೆ.
"10,000 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಹೇಳಿ ರದ್ದು ಪಡಿಸಲಾಗಿದೆ, ಆದರೆ, ಕಾರ್ಯಕ್ರಮ ನಡೆಯುತ್ತಿರುವ ಸಭಾಂಗಣದಲ್ಲಿ 1,500 ಮಂದಿಗಷ್ಟೇ ಆಸನ ಸೌಲಭ್ಯವಿದೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಶುಕ್ರವಾರ, ಕಾರ್ಯಕ್ರಮದ ಮೊದಲ ದಿನದಲ್ಲಿ ಸುಮಾರು 400-500 ಜನರು ಮಾತ್ರ ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಶುಕ್ರವಾರದಂದು ಅತಿಥಿಗಳ ಭಾಷಣಗಳು ಮತ್ತು ಪ್ಯಾನೆಲ್ ಚರ್ಚೆಯೊಂದಿಗೆ ಕಾರ್ಯಕ್ರಮದ ಮೊದಲ ದಿನ ಯಶಸ್ವಿಯಾಗಿ ಮುಕ್ತಾಯವಾಗಿತ್ತು. ಆದರೆ, ರಾತ್ರಿ ಸಮಯದಲ್ಲಿ, ವಿಶ್ವವಿದ್ಯಾಲಯದ ಅಧಿಕಾರಿಗಳು ಯಾವುದೇ ಕಾರಣವನ್ನು ನೀಡದೆ ಕಾರ್ಯಕ್ರಮವನ್ನು ಮುಂದೂಡುವಂತೆ ವಿದ್ಯಾರ್ಥಿಗಳಿಗೆ ಕೇಳಿದ್ದು, ಶನಿವಾರ ಬೆಳಿಗ್ಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ರಾತ್ರೋ ರಾತ್ರಿ 2 ಗಂಟೆ ಸುಮಾರಿಗೆ ವಿಶ್ವವಿದ್ಯಾನಿಲಯ ಆಡಳಿತವು ಸಭಾಂಗಣದಿಂದ ಅಲಂಕಾರಗಳನ್ನು ತೆಗೆದುಹಾಕಿದೆ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
"ಬೆಳಿಗ್ಗೆ ನಾವು ಕಾರ್ಯಕ್ರಮವನ್ನು ಪ್ರಾರಂಭಿಸಲು ಹೋದಾಗ, ಸಭಾಂಗಣಕ್ಕೆ ಬೀಗ ಹಾಕಿರುವುದು ಕಂಡುಬಂದಿದೆ. ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಮೌಖಿಕವಾಗಿ ಉಲ್ಲೇಖಿಸಿದ್ದಾರೆ, ಆದರೆ "ನಾವು ನಮ್ಮ ಕಡೆಯಿಂದ ಸುಗಮ ಕಾರ್ಯಕ್ರಮವನ್ನು ಖಚಿತಪಡಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
“ಕಾರ್ಯಕ್ರಮಕ್ಕೆ ಬರಲು ಕೆಲವು ಅತಿಥಿಗಳು ವಿಮಾನಗಳನ್ನು ಹತ್ತಲು ವಿಮಾನ ನಿಲ್ದಾಣಗಳಲ್ಲಿ ಕಾಯುತ್ತಿದ್ದರು ಮತ್ತು ಕೆಲವರು ಅತಿಥಿ ಗೃಹದಲ್ಲಿ ಕಾಯುತ್ತಿದ್ದರು. ಪ್ರೊ.ರಘುರಾಮ್ ರಾಜನ್ ಮಾತನಾಡಲಿರುವುದು ವಿಶ್ವವಿದ್ಯಾಲಯಕ್ಕೆ ಬಹಳ ಅಪರೂಪದ ಕ್ಷಣವಾಗಿತ್ತು. ಅವರು ಚಿಕಾಗೋದಲ್ಲಿದ್ದಾರೆ ಆದರೂ ಅವರು ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಲು ಒಪ್ಪಿಕೊಂಡಿದ್ದರು, ”ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪತ್ರಕರ್ತ ಆದಿತ್ಯ ಮೆನನ್ ಕಾರ್ಯಕ್ರಮ ರದ್ದತಿಯನ್ನು "ಅತ್ಯಂತ ನಿರಾಶಾದಾಯಕ" ಎಂದು ಕರೆದಿದ್ದು, ಅವರು ವಿದ್ಯಾರ್ಥಿಗಳಿಗೆ "ಇದನ್ನು ಏಕೆ ಮುಂದೂಡಲಾಗುತ್ತಿದೆ / ರದ್ದುಗೊಳಿಸಲಾಗಿದೆ?'ʼ ಎಂದು ಪ್ರಶ್ನಿಸಿದ್ದಾರೆ.
ಮೊದಲ ದಿನ, ಮೆನನ್ ಪ್ರಸ್ತುತ ಭಾರತೀಯ ರಾಜಕೀಯ ಪರಿಸ್ಥಿತಿ ಕುರಿತು ಉತ್ಸವದ ಉದ್ಘಾಟನಾ ಉಪನ್ಯಾಸವನ್ನು ನೀಡಿದರು. ಫ್ರೆಂಚ್ ಶಿಕ್ಷಣತಜ್ಞರಾದ ಡಾ ಲಾರೆನ್ಸ್ ಗೌಟೈರ್ ಅವರು ವಿಶ್ವವಿದ್ಯಾನಿಲಯಗಳ, ಭಿನ್ನಾಭಿಪ್ರಾಯದ ಜಾಗಗಳ ಐತಿಹಾಸಿಕ ಅಂಶದ ಕುರಿತು ಮಾತನಾಡಿದ್ದರು. ಉರ್ದು ಸಾಹಿತ್ಯದ ಎರಡು ಚರ್ಚಾ ಅವಧಿಗಳೂ ಇದ್ದವು. ಸಂಗೀತ ಕಾರ್ಯಕ್ರಮದೊಂದಿಗೆ ಮೊದಲ ದಿನವು ಕೊನೆಗೊಂಡಿತ್ತು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ಅಂತರದ ನಂತರ ಸಾಹಿತ್ಯ ಉತ್ಸವವನ್ನು ಆಯೋಜಿಸಲಾಗಿದೆ. ಕೊನೆಯ ಉತ್ಸವವನ್ನು 2019 ರಲ್ಲಿ ನಡೆಸಲಾಗಿತ್ತು. ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕಾಗಿ ಕಳೆದ ಮೂರು ತಿಂಗಳ ಕಾಲ ತಯಾರಿ ನಡೆಸಿದ್ದರು. "ಸಾಮಾನ್ಯವಾಗಿ ಆಡಳಿತವು ಉತ್ಸವವನ್ನು ಮಾಡಲು ವಿತ್ತೀಯವಾಗಿ ಕೊಡುಗೆ ನೀಡುತ್ತದೆ. ಆದರೆ ಈ ಬಾರಿ ಅವರು ತಮ್ಮ ಬಳಿ ಹಣವಿಲ್ಲ ಎಂದು ಹೇಳಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸಿ ಕಾರ್ಯಕ್ರಮ ಮಾಡಲಾಗಿತ್ತು" ಎಂದು ಬುಖಾರಿ ಹೇಳಿದ್ದಾರೆ.
ಈ ನಿರ್ಧಾರದ ಹಿಂದೆ ಯಾವುದೇ ಕಾರಣವನ್ನು ನೀಡದಿದ್ದರೂ, ಉತ್ಸವವನ್ನು ರದ್ದುಗೊಳಿಸಲು ವಿವಿ ಆಡಳಿತವು ಒತ್ತಡದಲ್ಲಿದೆ ಎಂದು ಸಂಘಟಕರು ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳಲ್ಲಿ ಚರ್ಚೆಗಳು ಮತ್ತು ಸಂವಾದಗಳನ್ನು ಸರ್ಕಾರ ಬಯಸುವುದಿಲ್ಲ ಎಂದು ಬುಖಾರಿ ಹೇಳಿದ್ದಾರೆ. "ನಾವು ಮುಖ್ಯವಾದ ಸಮಸ್ಯೆಗಳು ಮತ್ತು ನೀತಿಗಳನ್ನು ಚರ್ಚಿಸುವುದನ್ನು ಅವರು ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಅಧಿವೇಶನವನ್ನು ಯೋಜಿಸಿದ್ದೇವೆ. ನಿಸ್ಸಂಶಯವಾಗಿ, ಸರ್ಕಾರವು ಅದರ ಬಗ್ಗೆ ಅಸಮಾಧಾನ ಹೊಂದಿರಬೇಕು, ”ಎಂದು ಅವರು ಹೇಳಿದ್ದಾರೆ.