ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಿ: ಗ್ರಾಪಂ ಸದಸ್ಯರಿಗೆ ಮಂಜುನಾಥ ಭಂಡಾರಿ ಕರೆ

ಬಂಟ್ವಾಳ, ಮೇ 23: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಿದರೆ ಪಕ್ಷ ಸಂಘಟನೆಯಾವುದರೊಂದಿಗೆ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಫರಂಗಿಪೇಟೆಯಲ್ಲಿ ಶುಕ್ರವಾರ ನಡೆದ ಮುಡಿಪು ಬ್ಲಾಕ್ ವ್ಯಾಪ್ತಿಯ ಪುದು ಜಿಲ್ಲಾ ಪಂಚಾಯತ್ ಗೆ ಒಳಪಟ್ಟ ಜಿಲ್ಲಾ, ತಾಲೂಕು, ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪಕ್ಷದಲ್ಲಿ ಅವಕಾಶಗಳನ್ನು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಯುವ ನಾಯಕರನ್ನು ಬೆಳೆಸಬೇಕು. ಬಿಳಿ ಅಂಗಿ ಪ್ಯಾಂಟ್ ಹಾಕಿ ಪಕ್ಷದ ನಾಯಕರ ಹಿಂದೆ ಹೋದರೆ ನಾಯಕನಾಗಲ್ಲ. ಪಕ್ಷವನ್ನು ಕಟ್ಟಿ ಬೆಳೆಸುವುದರ ಮೂಲಕ ನಾಯಕನಾಗಬೇಕು ಎಂದರು.
ಇಂದು ಸರಕಾರದ ಬಹುತೇಕ ಸೇವಾ ಕಾರ್ಯಗಳು ಗ್ರಾಮ ಪಂಚಾಯತ್ ಮೂಲಕ ನಡೆಯುತ್ತಿವೆ. ಸೇವಾ ಕಾರ್ಯಗಳನ್ನು ಜನರಿಗೆ ತಲುಪಿಸಿದರೆ ಮಾತ್ರ ಮತ ನೀಡುತ್ತಾರೆ. ಗ್ರಾಮ ಪಂಚಾಯತ್ ಗಳಲ್ಲಿ ನಮ್ಮ ಸದಸ್ಯರೇ ಇಲ್ಲದಿದ್ದರೆ ಜನರಿಗೆ ಸೇವೆ ನೀಡುವವರು ಯಾರು? ಆದ್ದರಿಂದ ಗ್ರಾಮ ಪಂಚಾಯತ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸದಸ್ಯರಾಗಿ ಆಯ್ಕೆಯಾಗಬೇಕು ಎಂದರು.
ನಾನು ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿಯಾಗಿದ್ದು ನಿಮ್ಮ ಸಮಸ್ಯೆಗಳನ್ನು ತಿಳಿಯಲು ಈ ಸಭೆ ಕರೆಯಲಾಗಿದೆ. ನಿಮ್ಮ ಸಮಸ್ಯೆಗಳನ್ನು ಆಲಿಸಿ ವಿಧಾನ ಪರಿಷತ್ ನಲ್ಲಿ ಆ ಬಗ್ಗೆ ಚರ್ಚಿಸಲಾಗುವುದು. ವರ್ಷಕ್ಕೆ 2 ಕೋಟಿ ರೂ.ನಂತೆ, 6 ವರ್ಷಕ್ಕೆ 12 ಕೋಟಿ ರೂ. ಅನುದಾನ ನನಗೆ ಬರಲಿದೆ. ಪ್ರತಿ ಗ್ರಾಮದಲ್ಲಿರುವ ಸದಸ್ಯರು ಪಟ್ಟಿ ನೀಡಿದರೆ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿ ಬಿಡುಗಡೆ ಮಾಡಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಈಗಾಗಲೇ ದ.ಕ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸಭೆ ನಡೆಸಲಾಗಿದೆ. ಎರಡು ಕ್ಷೇತ್ರಗಳು ಬಾಕಿ ಉಳಿದಿದ್ದು ಅಲ್ಲಿ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಸದಸ್ಯರು ತಮ್ಮ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಮುಡಿಪು ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಕಾಜವ, ಜಿಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ದ.ಕ. ಕಾಂಗ್ರೆಸ್ ಪಂಚಾಯತ್ ರಾಜ್ ಘಟಕದ ಅಧ್ಯಕ್ಷ ಸುಭಾಷ್ ಶೆಟ್ಟಿ, ತುಂಬೆ ಗ್ರಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರ್, ವೃಂದಾ ಪೂಜಾರಿ, ಪದ್ಮನಾಭ ನರಿಂಗಾನ, ಡಿ.ಕೆ.ಸುಧೀರ್, ಗ್ರಾಪಂ ಸದಸ್ಯರು, ಬ್ಲಾಕ್, ವಲಯ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಮ್ಲಾನ್ ಮಾರಿಪಳ್ಳ ಧನ್ಯವಾದಗೈದರು.