ಮಣಿಪಾಲ: ವಿಶೇಷ ಚೇತನ ಮಕ್ಕಳ ಅರೈಕೆದಾರರಿಗೆ ಆರಿ ಕಸೂತಿ ತರಬೇತಿ
ಮಣಿಪಾಲ, ಮೇ 23: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಬೆಥನಿ ಸಂಜೀವಿನಿ ಕೇಂದ್ರದಲ್ಲಿ ದಿನವೂ ಚಿಕಿತ್ಸೆ ಪಡೆಯುವ ವಿಕಲ ಚೇತನ ಮಕ್ಕಳ ಪೋಷಕರಿಗೆ ಮತ್ತು ಆರೈಕೆದಾರರಿಗೆ ಬಿಡುವಿನ ಸಮಯದಲ್ಲಿ ಆರಿ ಕಸೂತಿ ವೃತ್ತಿಯನ್ನು ಕಲಿಯುವುದರ ಜೊತೆಗೆ ಆರ್ಥಿಕವಾಗಿಯೂ ಆದಾಯ ತರಬಲ್ಲ ಹೊಸ ಹಾದಿಯನ್ನು ಕಂಡುಕೊಳ್ಳಲು ಸಹಾಯಕವಾದ ಒಂದು ಅಪರೂಪದ ಪ್ರಯೋಗಕ್ಕೆ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಸೆಲ್ಕೋ ಸೋಲಾರ್ ಸಂಸ್ಥೆ ಮತ್ತು ಬೆಥನಿ ಸಂಜೀವಿನಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮುಂದಾಗಿದೆ.
ಆರಿ ಕಸೂತಿ ಬಲ್ಲ ಸ್ಥಳೀಯ ಸಂಪನ್ಮೂಲ ಮಹಿಳೆ ಲಕ್ಷ್ಮಿ ಇವರು ಈ 15 ದಿನಗಳ ತರಬೇತಿಯಲ್ಲಿ ಮಹಿಳೆಯರಿಗೆ ಕಸೂತಿಯ ಕೌಶಲ್ಯವನ್ನು ಹೇಳಿ ಕೊಡುತ್ತಿದ್ದಾರೆ. ತರಬೇತಿಯು ಮುಂದಿನ ಜೂನ್ 1ರವರೆಗೆ ನಡೆಯಲಿದೆ.
ತರಬೇತಿಯನ್ನು ಉದ್ಘಾಟಿಸಿದ ಬೆಥನಿ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಮಿಶೆಲ್ ಮಾತನಾಡಿ, ಬೆಥನಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೈಕೆದಾರರಿಗೆ ಒಂದು ಹೊಸ ಕಲಿಕೆಯ ಅವಕಾಶ ಇದಾಗಿದೆ. ಇಂತಹಾ ತರಬೇತಿಗಳನ್ನು ಇನ್ನು ಮುಂದೆಯೂ ಸಂಸ್ಥೆಯು ಆಯೋಜಿಸಲು ಉತ್ಸುಕವಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬರ್ಡ್ಸ್ ಸಂಸ್ಥೆಯ ಮುಖ್ಯಸ್ಥ ಮಹಂತೇಶ್ ಮಾತನಾಡಿದರು. ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ವ್ಯವಸ್ಥಾಪಕರ ಮನೋಹರ ಕಟ್ಗೇರಿ ಮಾತನಾಡಿ ಭಾರತೀಯ ವಿಕಾಸ ಟ್ರಸ್ಟ್ 4 ದಶಕಗಳಿಂದ ಮಹಿಳೆಯರ, ಸಮಾಜದ ಬಡಜನರ ಸಬಲೀಕರಣಕ್ಕೆ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಇದೀಗ ಭಾಗಲಕೋಟೆಯಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರ ಮತ್ತು ಸೆಲ್ಕೋ ಸಂಸ್ಥೆಯ ಸಹಭಾಗಿತ್ವದಿಂದ ಕೆಲಸ ಮಾಡುತ್ತಿದ್ದು ಎಲ್ಲ ಸಮಾನ ಮನಸ್ಕ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕೈ ಜೋಡಿಸು ವಂತೆ ಕರೆ ನೀಡಿದರು.
ಸೆಲ್ಕೋ ಸಂಸ್ಥೆಯ ಟ್ರೈನಿಂಗ್ ಎಕ್ಷಿಕ್ಯೂಟಿವ್ ಶಿವಕುಮಾರ್, ಬೆಥನಿ ಸಂಸ್ಥೆಯ ಸಿಬ್ಬಂದಿ ಆರೋಗ್ಯಸ್ವಾಮಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಭಾರತೀಯ ವಿಕಾಸ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಗುಳೇದಗುಡ್ಡ ಪರಿಸರದ 30ಕ್ಕೂ ಹೆಚ್ಚು ಆರೈಕೆದಾರ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.