ಕಂಬಳ ಸಮಿತಿಗಳ ಸಭೆ ಕರೆಯಲು ಮಂಜುನಾಥ್ ಭಂಡಾರಿ ಒತ್ತಾಯ

ಮಂಗಳೂರು: ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ರಾಜ್ಯ ಕಂಬಳ ಅಸೋಸಿಯೇಶನ್ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಕರಾವಳಿಯ ವಿವಿಧ ಕಂಬಳ ಸಮಿತಿಗಳ ಸಭೆಯನ್ನು ಕರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮಾ.23ರಂದು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ 330ನೇ ನಿಯಮದಡಿ ಕಂಬಳದ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಜ್ಯ ಸರಕಾರದಿಂದ ಅದಕ್ಕೆ ಪ್ರೋತ್ಸಾಹ ಧನ ನೀಡುವ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ್ದೆ. ಅದಕ್ಕೆ ಜಿಲ್ಲೆಯ ಎಲ್ಲಾ ಶಾಸಕರು ಪಕ್ಷ ಭೇದ ಮರೆತು ಬೆಂಬಲಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವರು ವಿಧಾನ ಪರಿಷತ್ತಿನ ಸಭಾಪತಿಗಳ ನೇತೃತ್ವದಲ್ಲಿ ಸಂಬಂಧಪಟ್ಟ ಶಾಸಕರು, ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸುತ್ತೇನೆ ಎಂಬ ಆಶ್ವಾಸನೆಯನ್ನು ಸದನದಲ್ಲಿ ನೀಡಿದ್ದರು. ಅದರಂತೆ ಎ.19ರಂದು ವಿಧಾನ ಪರಿಷತ್ತಿನ ಸಭಾಪತಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆದು ಅಧಿಕಾರಿಗಳೊಂದಿಗೆ ವುತ್ತು ಶಾಸಕರೊಂದಿಗೆ ಚರ್ಚಿಸಿದ್ದಾರೆ.
ಚರ್ಚಿಸಿದ ನಡವಳಿಯಲ್ಲಿ ಸೂಚಿಸಿರುವಂತೆ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ ಹಾಗೂ ಅದಕ್ಕೆ ಬೇಕಾದ ಕರಡು ಬೈಲಾ ಸಿದ್ಧಪಡಿಸಿ ಸರಕಾರದ ಅನುಮೋದನೆ ಪಡೆಯಬೇಕಾಗುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಅಧ್ಯಕ್ಷತೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು, ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳು ಹಾಗೂ ಕಂಬಳಕ್ಕೆ ಸಂಬಂಧಪಟ್ಟವರ ಸಭೆಯನ್ನು ಕರೆದು ಕರಡು ಬೈಲಾ ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಮುಂದಾಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.