ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಪ್ರತ್ಯೇಕ ವಾರ್ಡ್ ಗಳು ಸಜ್ಜು
ಮುಂಬೈ,ಮೇ 23: ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯು ಶಂಕಿತ ರೋಗಿಗಳನ್ನು ಪ್ರತ್ಯೇಕವಾಗಿರಿಸಲು ಇಲ್ಲಿಯ ಕಸ್ತೂರಬಾ ಆಸ್ಪತ್ರೆಯಲ್ಲಿ 28 ಹಾಸಿಗೆಗಳ ವಾರ್ಡ್ ನ್ನು ಸಜ್ಜುಗೊಳಿಸಿದೆ.
ನಗರದಲ್ಲಿ ಈವರೆಗೆ ಮಂಕಿಪಾಕ್ಸ್ ನ ಯಾವುದೇ ಶಂಕಿತ ಅಥವಾ ದೃಢೀಕೃತ ಪ್ರಕರಣಗಳು ವರದಿಯಾಗಿಲ್ಲ ಎಂದು ಬಿಎಂಸಿಯ ಆರೋಗ್ಯಾಧಿಕಾರಿಗಳು ತಿಳಿಸಿದರು.
ಮಂಕಿಪಾಕ್ಸ್ ಕಾಯಿಲೆಯು ಕಾಣಿಸಿಕೊಂಡಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ಶಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗುವುದು ಮತ್ತು ಅವರ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಗೆ ಕಳುಹಿಸಲಾಗುವುದು ಎಂದು ಬಿಎಂಸಿ ತನ್ನ ಸಲಹಾ ಸುತ್ತೋಲೆಯಲ್ಲಿ ತಿಳಿಸಿದೆ.
ಯಾವುದೇ ಶಂಕಿತ ಮಂಕಿಪಾಕ್ಸ್ ಪ್ರಕರಣದ ಬಗ್ಗೆ ಕಸ್ತೂರಬಾ ಆಸ್ಪತ್ರೆಗೆ ಮಾಹಿತಿ ನೀಡುವಂತೆ ಮತ್ತು ಶಂಕಿತ ರೋಗಿಗಳನ್ನು ಅಲ್ಲಿ ದಾಖಲಿಸುವಂತೆ ಬಿಎಂಸಿ ಮುಂಬೈ ಮಹಾನಗರದಲ್ಲಿಯ ಎಲ್ಲ ಆಸ್ಪತ್ರೆಗಳಿಗೆ ಸೂಚಿಸಿದೆ.
ಮಂಕಿಪಾಕ್ಸ್ ವೈರಲ್ ರೆನೊಟಿಕ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ) ಕಾಯಿಲೆಯಾಗಿದ್ದು,ಸಾಮಾನ್ಯವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ಹರಡುತ್ತದೆ. ರೋಗಿಗಳಲ್ಲಿ ಜ್ವರ,ದದ್ದು ಮತ್ತು ದುಗ್ಧರಸ ಗ್ರಂಥಿಗಳ ಊತದ ಲಕ್ಷಣಗಳು ಕಂಡು ಬರುತ್ತವೆ ಮತ್ತು ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಸ್ವಯಂ-ಸೀಮಿತ ಕಾಯಿಲೆಯಾಗಿದ್ದು,ಲಕ್ಷಣಗಳು ಎರಡರಿಂದ ನಾಲ್ಕು ವಾರಗಳವರೆಗೆ ಉಳಿದುಕೊಳ್ಳುತ್ತವೆ. ಗಂಭೀರ ಪ್ರಕರಣಗಳು ಉಂಟಾಗಬಹುದು ಮತ್ತು ಮರಣ ದರ ಶೇ.1ರಿಂದ ಶೇ.10ರವರೆಗೆ ಇರಬಹುದು. ಕಾಯಿಲೆಯು ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು. ವೈರಸ್ ಚರ್ಮದ ಬಿರುಕು (ಕಣ್ಣಿಗೆ ಗೋಚರವಲ್ಲದಿದ್ದರೂ), ಶ್ವಾಸನಾಳ ಅಥವಾ ಕಣ್ಣು,ಮೂಗು ಅಥವಾ ಬಾಯಿಯ ಲೋಳೆಯ ಪೊರೆಗಳ ಮೂಲಕ ಶರೀರವನ್ನು ಪ್ರವೇಶಿಸುತ್ತದೆ ಎಂದು ಬಿಎಂಸಿ ಸುತ್ತೋಲೆಯಲ್ಲಿ ವಿವರಿಸಿದೆ.