ಮಧ್ಯಪ್ರದೇಶದ ರತ್ಲಾಂನಲ್ಲಿ ಕೋಮು ಹಿಂಸಾಚಾರ: ನಾಲ್ವರಿಗೆ ಗಾಯ

ಭೋಪಾಲ,ಮೇ 23: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಎರಡು ಗುಂಪುಗಳು ಹಿಂಸಾಚಾರ ಮತ್ತು ಕಲ್ಲುತೂರಾಟದಲ್ಲಿ ತೊಡಗಿಕೊಂಡಿದ್ದರಿಂದ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.ರವಿವಾರ ರಾತ್ರಿ ಮುಸ್ಲಿಮ್ ಕುಟುಂಬವೊಂದು ಮದುವೆಯ ಬಳಿಕ ಮೆರವಣಿಗೆಯಲ್ಲಿ ಹೊರಟಿತ್ತು. ಅವರಲ್ಲಿ ಕೆಲವರು ಡಿಜೆ ಸಂಗೀತಕ್ಕೆ ನರ್ತಿಸುತ್ತಿದ್ದರು. ಮೆರವಣಿಗೆಯು ಕೋಥ್ಡಿ ಗ್ರಾಮದ ದೇವಸ್ಥಾನದ ಬಳಿಯಿಂದ ಹಾದು ಹೋಗುತ್ತಿದ್ದಾಗ ಹಿಂದು ಸಮುದಾಯಕ್ಕೆ ಸೇರಿದ ಗುಂಪೊಂದು ಹಾಡುಗಳ ನುಡಿಸುವಿಕೆಯನ್ನು ವಿರೋಧಿಸಿತ್ತು. ಇದು ಉಭಯ ಸಮುದಾಯಗಳ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿದ್ದು,ಶೀಘ್ರ ಹಿಂಸಾಚಾರಕ್ಕೆ ತಿರುಗಿತ್ತು. ಪರಸ್ಪರರತ್ತ ಕಲ್ಲು ತೂರಾಟ ನಡೆಸಲಾಗಿತ್ತು. ಕನಿಷ್ಠ ನಾಲ್ವರು ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಲು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಆಸುಪಾಸಿನ ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿತ್ತು. ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಸ್ಥಿತಿ ಈಗ ಶಾಂತವಾಗಿದ್ದರೂ ಯಾವುದೇ ಅಹಿತಕರ ಘಟನೆಯನ್ನು ತಡೆಯಲು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಒಂಭತ್ತು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.







