ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಶೇ.3.5ಕ್ಕೆ ಕುಸಿದಿರಬಹುದು: ವರದಿ

ಮುಂಬೈ,ಮೇ 23: ಲಾಭಾಂಶಗಳ ಮೇಲೆ ಆಧಿಕ ಸರಕು ಬೆಲೆಗಳ ಪರಿಣಾಮ,ಗೋಧಿ ಇಳುವರಿಯಲ್ಲಿ ಇಳಿಕೆ ಇತ್ಯಾದಿಗಳಿಂದಾಗಿ 2021-22ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿಯು ಹಿಂದಿನ ತ್ರೈಮಾಸಿಕದ ಶೇ.5.4ರಿಂದ ಶೇ.3.5 ಕ್ಕೆ ಕುಸಿದಿರಬಹುದು ಎಂದು ಇಕ್ರಾ ರೇಟಿಂಗ್ಸ್ ಸೋಮವಾರ ಹೇಳಿದೆ.
ದೇಶದಲ್ಲಿ ಮೂರನೇ ಕೋವಿಡ್ ಅಲೆಯಿಂದಾಗಿ ಜನಸಂಪರ್ಕವು ಮುಖ್ಯವಾಗಿರುವ ಸೇವೆಗಳ ಚೇತರಿಕೆಯಲ್ಲಿ ತೊಡಕುಗಳೂ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿರಬಹುದು ಎಂದು ತಿಳಿಸಿರುವ ಇಕ್ರಾ ರೇಟಿಂಗ್ಸ್,ಮೂಲ ಬೆಲೆಗಳಲ್ಲಿ (2011-12ರ ಸ್ಥಿರ ದರಗಳಲ್ಲಿ) ಒಟ್ಟು ಮೌಲ್ಯವರ್ಧನೆಯೂ ನಾಲ್ಕನೇ ತ್ರೈಮಾಸಿಕದಲ್ಲಿ ಮೂರನೇ ತ್ರೈಮಾಸಿಕದ ಶೇ.4.7ರಿಂದ ಶೇ.2.7ಕ್ಕೆ ಇಳಿದಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದೆ.
ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿಯು ಮೇ 31ರಂದು 2021-22ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅಂಕಿಅಂಶಗಳನ್ನು ಬಿಡುಗಡೆಗೊಳಿಸಲಿದೆ.
Next Story