ಕುಂದಾಪುರ: ಬೀಜಾಡಿ ಸಮುದ್ರ ತೀರದಲ್ಲಿ ಕಪ್ಪುದ್ರವ ಪತ್ತೆ; ತೀವ್ರ ಆತಂಕ

ಕುಂದಾಪುರ, ಮೇ 23: ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡ ಬೀಜಾಡಿಯ ಸಮುದ್ರ ತೀರದಲ್ಲಿ ಸ್ವಚ್ಛತೆ ನಡೆಸುತ್ತಿರುವಾಗ ತೇಲುವ ಕಪ್ಪುದ್ರವ ತೀರದುದ್ದಕ್ಕೂ ಹರಡಿರುವುದು ಗಮನಕ್ಕೆ ಬಂದಿದೆ. ದೊಡ್ಡಮಟ್ಟದಲ್ಲಿ ಟಾರ್‌ಬಾಲ್‌ಗಳು ಗೋಚರಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಸಮುದ್ರಕ್ಕೆ ಬಿಡಲಾಗುವ ಕ್ರೂಡ್ ಆಯಿಲ್ ಉಂಡೆ(ಟಾರ್ ಬಾಲ್) ಮಾದರಿಯಲ್ಲಿ ಕಂಡುಬಂದಿದೆ. ಇದರಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಗೋಚರಿಸಿದೆ. ಸಮುದ್ರ ತೀರದ ಸ್ವಚ್ಚತೆಗೆ ತೆರಳಿದ ತಂಡದಲ್ಲಿದ್ದ ಒಂದಿಬ್ಬರಿಗೆ ಎಣ್ಣೆ ಅಂಶದ ಟಾರ್ ಚಪ್ಪಲಿಗೆಲ್ಲಾ ಮೆತ್ತಿಕೊಂಡಿದೆ.
ಮೈಕ್ರೋಪ್ಲಾಸ್ಟಿಕ್, ಟಾರ್ ಬಾಲ್ ಜಲಚರ, ಮಾನವನಿಗೆ ಹಾನಿಕಾರ ಎಂಬುದು ಈಗಾಗಲೇ ಸಂಶೋಧನೆ ಯಲ್ಲಿ ದೃಢಪಟ್ಟಿದೆ. ಆದುದರಿಂದ ಸ್ವಚ್ಛತಾ ತಂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬಳಿಕ ತೀರಕ್ಕೆ ಆಗಮಿಸಿದ ಪ್ರವಾಸಿಗರಿಗೂ ನೀರಿನ ಅಪಾಯದ ಸ್ಥಿತಿಯ ಬಗ್ಗೆಯೂ ಎಚ್ಚರಿಕೆಯನ್ನು ತಂಡ ನೀಡಿದೆ.
ಸಮುದ್ರ ಜೈವಿಕ ವ್ಯವಸ್ಥೆಗೆ ಮಾರಕವಾದ ಈ ಪೆಟ್ರೋಲಿಯಂ ತ್ಯಾಜ್ಯ ಸಮುದ್ರ ತೀರದಲ್ಲಿ ನೂರಾರು ಕಿಲೋಮೀಟರ್ ಗಟ್ಟಲೆ ಹರಡಿರುವುದು ಹೇಗೆ? ಗೊತ್ತಿಲ್ಲದೆ ನಡೆಯುವ ಪ್ರಮಾದವೇ? ಪರೋಕ್ಷವಾಗಿ ಸಮುದ್ರದ ಆಹಾರ ತಿನ್ನುವವನ ಆರೋಗ್ಯಕ್ಕೂ ಇದು ಮಾರಕವಲ್ಲವೇ? ಸಂಬಂಧಪಟ್ಟವರು ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ತಂಡದವರು ಒತ್ತಾಯಿಸಿದ್ದಾರೆ.
