"ಹವಾಮಾನ ಬದಲಾವಣೆಯು ಭಾರತ ಮತ್ತು ಪಾಕಿಸ್ತಾನದಲ್ಲಿ ಶಾಖದ ಅಲೆಯನ್ನು 30 ಪಟ್ಟು ಹೆಚ್ಚಿಸಿದೆ": ಅಧ್ಯಯನ ವರದಿ

ಹೊಸದಿಲ್ಲಿ: ಸೋಮವಾರ ಅಂತರರಾಷ್ಟ್ರೀಯ ವಿಜ್ಞಾನಿಗಳ ಗುಂಪು ಪ್ರಕಟಿಸಿದ ಅಧ್ಯಯನದ ಪ್ರಕಾರ, ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನವು ಮೈಸುಡುವಂತಹ ಶಾಖದ ಅಲೆಯನ್ನು (ಬಿಸಿಗಾಳಿ) ಅನುಭವಿಸಿದ್ದು, ಇದು ಹವಾಮಾನ ಬದಲಾವಣೆಯ ಕಾರಣದಿಂದ 30 ಪಟ್ಟು ಹೆಚ್ಚಾಗಿದೆ ಎಂದು ಹೇಳಿದೆ.
"ಹವಾಮಾನ ಬದಲಾವಣೆಯಿಂದಾಗಿ 2022ರಲ್ಲಿ ಶಾಖದ ಅಲೆಯು 30 ಪಟ್ಟು ಹೆಚ್ಚಾಗಿದೆ" ಎಂದು ವರ್ಲ್ಡ್ ವೆದರ್ ಅಟ್ರಿಬ್ಯೂಷನ್ ಬಿಡುಗಡೆ ಮಾಡಿದ ವರದಿ ಹೇಳಿದೆ. "ಇದೇ ರೀತಿಯ ಘಟನೆಯು ಕೈಗಾರಿಕಾ ಪೂರ್ವದ ಹವಾಮಾನದಲ್ಲಾಗಿದ್ದರೆ 1 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತಿತ್ತು" ಎಂದು ಹೇಳಿದೆ.
ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ, ಭಾರತವು 122 ವರ್ಷಗಳಲ್ಲಿ ಮಾರ್ಚ್‌ನಲ್ಲಿ ಅತಿ ಹೆಚ್ಚು ಬಿಸಿಯನ್ನು ಅನುಭವಿಸಿದೆ. ಶಾಖದ ಅಲೆಗಳಿಂದಾಗಿ ದೇಶದ ಕೆಲವು ಭಾಗಗಳು ಏಪ್ರಿಲ್‌ನಲ್ಲಿ ದಾಖಲೆಯ ಗರಿಷ್ಠ ತಾಪಮಾನವನ್ನು ಅನುಭವಿಸಿವೆ. ಮೇ 15 ರಂದು ದಿಲ್ಲಿಯಲ್ಲಿ ತಾಪಮಾನವು 49.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು.
ಗೋಧಿ-ಉತ್ಪಾದಿಸುವ ಅನೇಕ ರಾಜ್ಯಗಳಲ್ಲಿ ತೀವ್ರವಾದ ಶಾಖದ ಅಲೆಗಳು ಬೀಸಿದ ಕಾರಣ ಈ ವರ್ಷ ಗೋಧಿ ಉತ್ಪಾದನೆಯಲ್ಲಿ 3% ರಷ್ಟು ಕುಸಿತ ಕಂಡಿದೆ. ತಾಪಮಾನವು ಏರಿಕೆಯಾದ ಕಾರಣ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿತ್ತು. ಸೋಮವಾರದ ಅಧ್ಯಯನದಲ್ಲಿ, ಶಾಖದ ಅಲೆಯು ಭಾರತ ಮತ್ತು ಪಾಕಿಸ್ತಾನದಾದ್ಯಂತ ಕನಿಷ್ಠ 90 ಸಾವುಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅಧ್ಯಯನದ ಭಾಗವಾಗಿರುವ ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹವಾಮಾನ ವಿಜ್ಞಾನಿ ಅರ್ಪಿತಾ ಮೊಂಡಲ್, ಈ ವರದಿಯು "ಬರಲಿರುವ ವಿಷಯಗಳ ಸಂಕೇತ" ಎಂದು ಹೇಳಿದರು.







