ನ್ಯಾಯಾಲಯದ ಆದೇಶಕ್ಕೆ ಬದ್ಧವಿರಲು ಮಸೀದಿ ಆಡಳಿತ ನಿರ್ಧಾರ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ
ಮಳಲಿ ಪೇಟೆ ಜುಮಾ ಮಸೀದಿ ವಿವಾದ

ಮಂಗಳೂರು : ದ.ಕ. ಜಿಲ್ಲೆಯ ತೆಂಕ ಉಳಿಪಾಡಿಯ ಮಳಲಿ ಪೇಟೆಯ ಜುಮಾ ಮಸೀದಿ ನವೀಕರಣದ ಸಂದರ್ಭ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿ ಮಸೀದಿಯ ಆಡಳಿತ ಮಂಡಳಿ ನ್ಯಾಯಾಲಯದ ಆದೇಶವನ್ನು ಪಾಲನೆಯ ಭರವಸೆಯೊಂದಿಗೆ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಇತ್ತೀಚೆಗೆ ಮಸೀದಿ ನವೀಕರಣಕ್ಕೆ ಸಂಬಂಧಿಸಿ ಆಡಳಿತ ಮಂಡಳಿಯವರು ಹಳೆ ಕಟ್ಟಡವನ್ನು ಕೆಡಹುವ ಸಂದರ್ಭ ಅಲ್ಲಿ ದೇವಸ್ಥಾನ ರೀತಿಯ ರಚನೆ ಕಂಡು ಬಂದಿದೆ ಎಂಬ ಬಗ್ಗೆ ಕೆಲ ಸಂಘಟನೆಗಳು ಮನವಿ ನೀಡಿತ್ತು. ಈ ಬಗ್ಗೆ ಎಸಿ, ತಹಶೀಲ್ದಾರ್ ರನ್ನು ಅಲ್ಲಿಗೆ ಕಳುಹಿಸಿ ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಿರ್ದೇಶಿಸಲಾಗಿತ್ತು. ಆ ಬಳಿಕ ಜೆಎಂಎಫ್‌ಸಿ ನ್ಯಾಯಾಲಯವು ನವೀಕರಣ ಕಾರ್ಯಕ್ಕೆ ಸಂಬಂಧಿಸಿ ತಾತ್ಕಾಲಿಕ ಆದೇಶ ನೀಡಿ, ಮುಂದಿನ ಆದೇಶದವರೆಗೆ ಯಾವುದೇ ರೀತಿಯ ನಿರ್ಮಾಣ ಕಾಮಗಾರಿ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ನಿರ್ದೇಶಿಸಿದೆ. ಇದಾಗಿ ಜಿಲ್ಲಾಡಳಿತಕ್ಕೆ ವಿವಿಧ ಸಂಘಟನೆಗಳು ಮನವಿ ನೀಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಜುಮಾ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿಯನ್ನು ಕರೆಸಿ, ಪೊಲೀಸ್ ಆಯುಕ್ತರು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದ್ದು, ಮಸೀದಿ ಆಡಳಿತ ಮಂಡಳಿಯವರು ನ್ಯಾಯಾಲಯದ ಆದೇಶವನ್ನು ಪಾಲಿಸಿಕೊಂಡು ಜಿಲ್ಲಾಡಳಿತದ ನಿರ್ದೇಶನಕ್ಕೆ ಮನ್ನಣೆ ನೀಡುವುದಾಗಿ ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ನಡುವೆ ವಿವಿಧ ಸಂಘಟನೆಗಳು ಹಲವಾರು ರೀತಿಯ ಪ್ರಶ್ನೆಗಳನ್ನು ಎತ್ತಿದ್ದು, ಅದು ಅವರ ವೈಯಕ್ತಿಕ ವಿಚಾರವಾಗಿದ್ದು, ಜಿಲ್ಲೆಯ ಜನತೆ ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಕೋರಿ ಸಭೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.