2024ರ ಚುನಾವಣೆ: ಹಿರಿಯ ನಾಯಕರನ್ನೊಳಗೊಂಡ ರಾಜಕೀಯ ಸಮಿತಿ, ಕಾರ್ಯಪಡೆ ರಚಿಸಿದ ಕಾಂಗ್ರೆಸ್
ಸಮಿತಿಯಲ್ಲಿ ಪ್ರಶಾಂತ್ ಕಿಶೋರ್ ಮಾಜಿ ಸಹವರ್ತಿ ಸುನೀಲ್ ಕಾನುಗೋಲುಗೆ ಸ್ಥಾನ

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಎಂಟು ಸದಸ್ಯರ ರಾಜಕೀಯ ವ್ಯವಹಾರಗಳ ಗುಂಪು ಹಾಗೂ ಕಾರ್ಯಪಡೆ ರಚನೆ ಮಾಡಿರುವುದಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಘೋಷಿಸಿದ್ದಾರೆ. ಪಕ್ಷದಲ್ಲಿ ಸಂಘಟನೆ ಸುಧಾರಣೆಗಳನ್ನು ಬಯಸಿದ ಜಿ-23 ಗುಂಪಿನ ಸದಸ್ಯರನ್ನೂ ಸೇರಿಸಿಕೊಳ್ಳಲಾಗಿದೆ.
ಪಕ್ಷವು ತನ್ನ 'ಭಾರತ್ ಜೋಡೋ ಯಾತ್ರೆ'ಗಾಗಿ ಕೇಂದ್ರ ಯೋಜನಾ ಗುಂಪನ್ನು ಕೂಡ ರಚಿಸಿದೆ.
ರಾಜಕೀಯ ವ್ಯವಹಾರಗಳ ಗುಂಪಿನ ಸದಸ್ಯರಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ದಿಗ್ವಿಜಯ ಸಿಂಗ್, ಕೆ.ಸಿ. ವೇಣುಗೋಪಾಲ್, ಜಿತೇಂದ್ರ ಸಿಂಗ್ ಹಾಗೂ ಜಿ-23 ನಾಯಕರಾದ ಗುಲಾಂ ನಬಿ ಆಝಾದ್ ಹಾಗೂ ಆನಂದ್ ಶರ್ಮಾ ಸೇರಿದ್ದಾರೆ.
ಕಾರ್ಯಪಡೆ ಸಮಿತಿ ಎಂಟು ಸದಸ್ಯರನ್ನು ಹೊಂದಿದೆ. ಇದರಲ್ಲಿ ಪಿ. ಚಿದಂಬರಂ, ಮುಕುಲ್ ವಾಸ್ನಿಕ್, ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲಾ ಹಾಗೂ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿ ಸುನೀಲ್ ಕಾನುಗೋಲು ಸೇರಿದ್ದಾರೆ.
ಕಾರ್ಯಪಡೆಯ ಪ್ರತಿಯೊಬ್ಬ ಸದಸ್ಯರಿಗೆ ಸಂಸ್ಥೆ, ಸಂವಹನ, ಮಾಧ್ಯಮ, ಪ್ರಭಾವ, ಹಣಕಾಸು ಮತ್ತು ಚುನಾವಣಾ ನಿರ್ವಹಣೆಗೆ ಸಂಬಂಧಿಸಿದ ನಿರ್ದಿಷ್ಟ ಕಾರ್ಯವನ್ನು ನಿಯೋಜಿಸಲಾಗುತ್ತದೆ.
'ಭಾರತ್ ಜೋಡೋ ಯಾತ್ರೆ'ಯ ಸಮನ್ವಯಕ್ಕಾಗಿ ಕೇಂದ್ರ ಯೋಜನಾ ಗುಂಪು ದಿಗ್ವಿಜಯ ಸಿಂಗ್, ಸಚಿನ್ ಪೈಲಟ್, ಶಶಿ ತರೂರ್, ರವನೀತ್ ಸಿಂಗ್ ಬಿಟ್ಟು, ಕೆ.ಜೆ. ಜಾರ್ಜ್, ಜೋತಿಮಣಿ, ಪ್ರದ್ಯುತ್ ಬೊರ್ಡೊಲೊಯ್, ಜಿತು ಪಟ್ವಾರಿ ಮತ್ತು ಸಲೀಮ್ ಅಹ್ಮದ್ ಸೇರಿದಂತೆ ಒಂಬತ್ತು ಸದಸ್ಯರನ್ನು ಹೊಂದಿದೆ.







