ಮೇ 25ರಂದು ಎಸ್.ಕೆ.ಎಸ್.ಎಮ್ ಯೂತ್ ವಿಂಗ್ ನಿಂದ ಇಸ್ಲಾಮೀ ಸಮ್ಮೇಳನ

ಮಂಗಳೂರು : ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಇದರ ಅಂಗ ಸಂಸ್ಥೆಯಾದ ಸಲಫಿ ಗರ್ಲ್ಸ್ ವಿಮೆನ್ಸ್ ಮೂವ್ಮೆಂಟ್ ವತಿಯಿಂದ ದಿ ಐಡಿಯಲ್ ವುಮನ್ - ಇಸ್ಲಾಮೀ ಮಹಿಳಾ ಸಮಾವೇಶ ಹಾಗೂ ಎಸ್.ಕೆ.ಎಸ್.ಎಮ್ ಯೂತ್ ವಿಂಗ್ ವತಿಯಿಂದ ದಿ ಐಡಿಯಲ್ ಯೂತ್ - ಇಸ್ಲಾಮೀ ಯೂತ್ ಸಮ್ಮೇಳನ ಮೇ25ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಯುವ ವಿಭಾಗದ ಅಧ್ಯಕ್ಷರಾದ ಮುಹಮ್ಮದ್ ಆತಿಶ್, ಮಹಿಳಾ ಸಮ್ಮೇಳನ ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ನಡೆಯಲಿದೆ ಎಂದರು.
ಸಮ್ಮೇಳನದಲ್ಲಿ ಉಮ್ಮು ಫಾಝಿಲ್ ಬ್ಯಾರಿ ಭಾಷೆಯಲ್ಲಿ ‘ಕುರ್‌ಆನ್ ನಮ್ಮ ಜೀವನದ ಮೇಲೆ ಪ್ರಭಾವ ಬೀರಲಿ’ ಎಂಬ ವಿಷಯದಲ್ಲಿ, ಹಫೀಝಾ ಸ್ವಲಾಹಿಯಾ ರವರು ಬ್ಯಾರಿಯಲ್ಲಿ ‘ತೌಹೀದ್ ಅಂತ್ಯ ಶ್ವಾಸದವರೆಗೆ’ ಎಂಬ ವಿಷಯದಲ್ಲಿ, ಮುಝಾಹಿದ ಬ್ಯಾರಿ ಭಾಷೆಯಲ್ಲಿ ‘ಲೌಕಿಕ ಜೀವನದ ನಶ್ವರತೆ’ ಹಾಗೂ ಜುವೇರಿಯಾ ಹಯಾತ್ ಉರ್ದುವಿನಲ್ಲಿ ‘ವಿವಾಹದ ಮುಂಚೆ ಮತ್ತು ನಂತರ ಪೋಷಕರ ಮತ್ತು ಕುಟುಂಬ ಪಾತ್ರ’ ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ.
ಇಸ್ಲಾಮೀ ಮಹಿಳಾ ಸಮಾವೇಶದ ನಂತರ ಯುವ ಘಟಕದಿಂದ ದಿ ಐಡಿಯಲ್ ಯೂತ್ - ಇಸ್ಲಾಮೀ ಯುವ ಸಮಾವೇಶವು ಸಂಜೆ 4.45 ರಿಂದ 9.30 ರವರೆಗೆ ನಡೆಯಲಿದೆ. ಈ ಸಮ್ಮೇಳನದಲ್ಲಿ ಶೈಖ್ ಅಬ್ದುಲ್ ಲತೀಫ್ ಮದನಿ ಉರ್ದುವಿನಲ್ಲಿ ‘ಕುಟುಂಬ ಯೋಗಕ್ಷೇಮದಲ್ಲಿ ಯುವಕರ ಪಾತ್ರ’, ಇಂಜಿನಿಯರ್ ಮುಹಮ್ಮದ್ ಆತೀಶ್ ಬ್ಯಾರಿಯಲ್ಲಿ ‘ಮುಸ್‌ಅಬ್ ಬಿನ್ ಉಮೈರ್ (ರ) ರವರ ತ್ಯಾಗೋಜ್ವಲ ಜೀವನ’ ಎಂಬ ವಿಷಯದ ಕುರಿತು ಹಾಗೂ ಅಹ್ಮದ್ ಹಾಮೆದ್ ಇಂಗ್ಲಿಷ್‌ನಲ್ಲಿ ‘ಪ್ರೊಡಕ್ಟಿವ್ ಯೂತ್’ ಎಂಬ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಸೌದಿ ಅರೇಬಿಯಾದ ಸ್ಯಾಕೋ ಕಾಂಟ್ರಾಕ್ಟಿಂಗ್ ಕಂಪನಿಯ ಸಿಇಒ, ಅಲ್- ಇಬಾದಾ ಇಂಇಯನ್ ಸ್ಕೂಲ್ ಮಣಿಪಾಲ- ಉಡುಪಿ ಇದರ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಹಮ್ಮಾದ್ ಬಶೀರ್ ಸಾಗರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಎಸ್‌ಕೆಎಸ್‌ಎಂ ಮಂಗಳೂರು ಇದರ ಅಧ್ಯಕ್ಷ ಬಶೀರ್ ಅಹಮದ್ ಶಾಲಿಮಾರ್ ಉದ್ಘಾಟಿಸಲಿ ದ್ದಾರೆ ಎಂದು ಅವರು ವಿವರಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೂಸಾ ಫಾಝಿಲ್, ಕಾರ್ಯದರ್ಶಿ ಮುಹಮ್ಮದ್ ಬಾಶಿತ್ ಉಪಸ್ಥಿತರಿದ್ದರು.







