ಭಟ್ಕಳ: ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ; ಅತ್ಯಾಚಾರದ ಬಳಿಕ ಹತ್ಯೆ ಶಂಕೆ
ಭಟ್ಕಳ: ತಾಲೂಕಿನ ಗುಳ್ಮಿ ಸಮೀಪದ ತಲಾಂದ್ ಗುಡ್ಡದ ಮೇಲಿನ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರದ ಬಳಿಕ ಹತ್ಯೆಗೈದಿರಬಹುದು ಎಂದು ಶಂಕಿಸಲಾಗಿದೆ.
ಮಂಗಳವಾರ ಬೆಳಗ್ಗೆ ಮಹಿಳೆಯೊಬ್ಬರು ಈ ಸ್ಥಳದಿಂದ ಹಾದು ಹೋಗುತ್ತಿದ್ದ ವೇಳೆ ದುರ್ವಾಸನೆ ಬರುತ್ತಿದ್ದು, ಕೂಡಲೇ ಅವರು ಸಮೀಪದ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರಬಹುದು ಎಂಬುದು ಸ್ಪಷ್ಟವಾಗಿದೆ. ಇದು ಒಬ್ಬ ವ್ಯಕ್ತಿಯ ಕೃತ್ಯವಾಗಿರದೆ ಸಾಮೂಹಿಕ ಅತ್ಯಾಚಾರ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಿಳೆಗೆ ಸುಮಾರು 35 ರಿಂದ 40 ವರ್ಷ ವಯಸ್ಸಾಗಿದ್ದು, ಸಾಗರ ರಸ್ತೆಯಲ್ಲಿರುವ ಅಥವಾ ಸಮೀಪದ ಗ್ರಾಮದ ಮಹಿಳೆಯಾಗಿರಬಹುದು ಎಂದು ಶಂಕಿಸಲಾಗಿದೆ. ಹಾಗೇಯೆ ಈ ಘಟನೆ ನಡೆದು 3-4 ದಿನ ಕಳೆದಿರಬಹುದು ಎಂದೂ ಶಂಕಿಸಲಾಗಿದೆ.
ಶನಿವಾರ ಸಂಜೆ ವ್ಯಕ್ತಿಯೊಂದಿಗೆ ಮಹಿಳೆಯೊಬ್ಬರು ಬೈಕಿನಲ್ಲಿ ತಲಾಂದ್ ಗುಡ್ಡದ ಕಡೆಗೆ ಹೋಗುತ್ತಿರುವುದನ್ನು ನೋಡಿದ್ದಾಗಿ ಗುಳ್ಮಿ ಪ್ರದೇಶದ ಜನರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಮಹಿಳೆಯ ಮೃತದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಕುಟುಂಬಸ್ಥರು ಬಂದ ನಂತರವಷ್ಟೇ ಶವ ಪರೀಕ್ಷೆ ನಡೆಸಲಾಗುವುದು. ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಮಹಿಳೆಯ ಗುರುತು ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಬೆಳ್ಳಿಯಪ್ಪ ಪರಿಶೀಲನೆ ನಡೆಸಿದ್ದಾರೆ.