ರಾಮನಿಗೆ ಜೀವವಿದ್ದಿದ್ದರೆ ಬಿಜೆಪಿಗರ ಮೇಲೆಯೇ ಕೇಸು ಹಾಕುತ್ತಿದ್ದ: ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ
‘'ಬುದ್ದನು ಪ್ರಧಾನಿಯ ಮಾತಿನ ಸರಕಾಗದಿರಲಿ''

ಬೆಂಗಳೂರು, ಮೇ 24: ‘ಪುರಾಣದ ಪುಸ್ತಕದ ಒಳಗಿರುವ ರಾಮ ಏನೂ ಮಾಡಲಾರ, ನಮ್ಮನ್ನೇನೂ ಕೇಳಲಾರ ಎಂಬ ಸ್ಪಷ್ಟತೆ ಇವರಿಗೆ ಇರುವುದರಿಂದಲೇ ರಾಮನ ಹೆಸರಲ್ಲಿ ಮಾನಸಿಕ ಭ್ರಷ್ಟರಾಗಿ ರಾಮನ ಮಾನವನ್ನೂ ಬಿಜೆಪಿಗರು ಕಳೆಯುತ್ತಿದ್ದಾರೆ. ಒಂದು ವೇಳೆ ಪುಸ್ತಕದ ರಾಮನಿಗೆ ಜೀವವಿದ್ದಿದ್ದರೆ ಬಿಜೆಪಿಗರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದ ಎನ್ನುವುದಂತೂ ಸತ್ಯ!' ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಇಂದಿಲ್ಲಿ ಟೀಕಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಅಸಮಾನತೆಯ ಕೂಪದಲ್ಲಿ ನರಳಿದ್ದ ಭಾರತದ ಮೂಲ ನಿವಾಸಿಗಳು ಬೌದ್ಧಧರ್ಮದ ಅಡಿಯಲ್ಲಿ ರಕ್ಷಣೆ ನೀಡುವ ಕೆಲಸ ಮಾಡಿದ್ದು ಬುದ್ಧ. ನದಿಯ ನೀರಿನ ಹಂಚಿಕೆ ವಿಷಯದಲ್ಲಿ ಯುದ್ಧ ಮಾಡಲೇಬೇಕೆಂಬ ಒತ್ತಡ ತನ್ನ ಮೇಲೆ ಬಂದಾಗ ಹಿಂಸೆ ಆಗುತ್ತದೆ ಎಂಬ ಒಂದೇ ಕಾರಣಕ್ಕೆ ರಾಜ್ಯವನ್ನೇ ತೊರೆದು ಹೋದ ಮಹಾಶಯ ಬುದ್ಧ. ನಂತರ ಜ್ಞಾನ, ಧ್ಯಾನ ಮತ್ತು ಶಾಂತಿ ಮಾರ್ಗದ ಮೂಲಕ ಜಗತ್ತನ್ನೇ ತನ್ನೆಡೆಗೆ ಸೆಳೆದ ಬುದ್ಧನ ಆಲೋಚನೆಗಳನ್ನು ಈ ದಿನ ಭಾರತಕ್ಕಿಂತಲೂ ಹೊರಗಿನ ದೇಶಗಳೇ ಹೆಚ್ಚಾಗಿ ಅನುಕರಣೆ ಮಾಡುತ್ತವೆ.
ಆದರೆ, ನಮ್ಮ ದೇಶದಲ್ಲಿ ಈಗಾಗಲೇ ರಾಮನ ಹೆಸರಲ್ಲಿ ನೂರೆಂಟು ಹಿಂಸಾಚಾರ, ಅನಾಚಾರ ಮತ್ತು ಅರಾಜಕತೆಯನ್ನು ಸೃಷ್ಟಿ ಮಾಡಿ ಆರೆಸೆಸ್ಸ್ ಹಾಗೂ ಅದರ ಉಪ ಉತ್ಪನ್ನಗಳಾದ ಬಿಜೆಪಿ, ಶ್ರೀರಾಮಸೇನೆ, ಬಜರಂಗ ದಳದವರು ದೇಶವನ್ನು ಅಂತರಂಗದಿಂದ ಸೋಲಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಈ ದಿನ ಬೆಲೆ ಏರಿಕೆ, ಆರ್ಥಿಕ ಕುಸಿತ, ನೇಮಕಾತಿ ಅಕ್ರಮ ಹಾಗೂ ಜನರ ಬದುಕಿನ ಸಂಕಷ್ಟದ ನಡುವೆ, ಹಿಜಾಬ್, ಹಲಾಲ್, ಅಝಾನ್‍ನಂತಹ ಕೆಲಸಕ್ಕೆ ಬಾರದ ಮತ್ತು ಯಾರಿಗೂ ಪ್ರಯೋಜನ ಉಂಟುಮಾಡದ ವಿವಾದಗಳನ್ನು ಹುಟ್ಟು ಹಾಕಲಾಗಿದೆ' ಎಂದು ಟೀಕಿಸಿದ್ದಾರೆ.
‘ಪ್ರಧಾನಿ ನಮ್ಮ ದೇಶದೊಳಗೆ ರಾಮ ಎಂದು ಹೇಳಿ, ಹೊರ ದೇಶದಲ್ಲಿ ಬುದ್ಧ ಎನ್ನುವುದು ಯಾವ ಕಾರಣಕ್ಕೆ? ಎಂಬುದನ್ನು ಅವರೇ ಸ್ಪಷ್ಟ ಪಡಿಸಬೇಕಿದೆ. ಈಗಾಗಲೇ ತಮ್ಮ ದುರಾಡಳಿತ ಮತ್ತು ದ್ವೇಷದ ಮೂಲಕ ರಾಮ ಮತ್ತು ಬುದ್ಧನ ಮರ್ಯಾದೆ ಕಳೆದಿರುವ ಬಿಜೆಪಿಯ ಕೋಮುವಾದಿಗಳು ಮೊದಲು ಸಹಜ ಮನುಷ್ಯರಾಗಿ ಬದಲಾಗಬೇಕಿದೆ. ಅದರಲ್ಲೂ ಜಪಾನ್‍ಗೆ ಹೋಗಿ ‘ಬುದ್ಧನ ಮಾರ್ಗ ಅನುಸರಿಸುವ ಅಗತ್ಯವಿದೆ' ಎನ್ನುತ್ತಿರುವ ಪ್ರಧಾನಿ ಮೋದಿ ಆ ಅಗತ್ಯ ಮೊದಲು ತಮಗಿದೆ ಎಂಬುದನ್ನು ಮನಗಾಣಬೇಕು. ಆಗ ಮಾತ್ರವೇ ದೇಶದ ಒಳಗೆ ಯುದ್ಧ, ದೇಶದ ಹೊರಗೆ ಬುದ್ಧ ಎನ್ನುವಂತಹ ಇವರ ಆತ್ಮದ್ರೋಹದ ಮಾತುಗಳು ನಿಲ್ಲುವ ಸಂಭವ ಇದೆ' ಎಂದು ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾಣದ ಪುಸ್ತಕದ ಒಳಗಿರುವ ರಾಮ ಏನೂ ಮಾಡಲಾರ, ನಮ್ಮನ್ನೇನೂ ಕೇಳಲಾರ ಎಂಬ ಸ್ಪಷ್ಟತೆ ಇವರಿಗೆ ಇರುವುದರಿಂದಲೇ ರಾಮನ ಹೆಸರಲ್ಲಿ ಮಾನಸಿಕ ಭ್ರಷ್ಟರಾಗಿ ರಾಮನ ಮಾನವನ್ನೂ ಕಳೆಯುತ್ತಿದ್ದಾರೆ
— Dr H.C.Mahadevappa (@CMahadevappa) May 24, 2022
ಒಂದು ವೇಳೆ ಪುಸ್ತಕದ ರಾಮನಿಗೆ ಜೀವವಿದ್ದಿದ್ದರೆ ತನ್ನ ಹೆಸರು ಹಾಳು ಮಾಡುವ ಈ ಬಿಜೆಪಿಗರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದ!!
4/4







