ʼಧ್ವನಿವರ್ಧಕದ ಮೂಲಕ ಆಝಾನ್ʼ ಧಾರ್ಮಿಕ ವಿದ್ವಾಂಸರಿಂದ ತೀರ್ಮಾನ: ಶಾಫಿ ಸಅದಿ

ಶಾಫಿ ಸಅದಿ
ಮಂಗಳೂರು : ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅಝಾನ್ ಕರೆ ಕೊಡುವುದನ್ನು ನಿಲ್ಲಿಸಬೇಕೋ ಬೇಡವೋ ಎಂಬುದನ್ನು ಉಲಮಾ (ಧಾರ್ಮಿಕ ವಿದ್ವಾಂಸರು) ತೀರ್ಮಾನಿಸುತ್ತಾರೆಯೇ ವಿನಃ ವಕ್ಫ್ ಬೋರ್ಡ್ ಅಥವಾ ಹಜ್ ಕಮಿಟಿ ನಿರ್ಧರಿಸುವುದಿಲ್ಲ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಹೇಳಿದರು.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 2005ರ ಸುಪ್ರೀಂ ಕೋರ್ಟ್ ಅಥವಾ ರಾಜ್ಯ ಸರಕಾರದ ಆದೇಶಗಳು ರಾತ್ರಿ ವೇಳೆ ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯದ ವಿರುದ್ಧ ಇದೆಯೇ ಹೊರತು ಅಝಾನ್ ಕೂಗಬಾರದು ಎಂದಿಲ್ಲ. ಈ ಕುರಿತು 2017ರಲ್ಲಿ ವಕ್ಫ್ ಬೋರ್ಡ್ ಸುತ್ತೋಲೆ ಕಳುಹಿಸಿದೆ. ಅದು ಬಿಟ್ಟು ಬೇರೆ ಸುತ್ತೋಲೆ ಹೊರಡಿಸಿಲ್ಲ. ಇನ್ನು ಕಳುಹಿಸುವುದೂ ಇಲ್ಲ ಎಂದರು.
ಅಝಾನ್ ಎಂಬುದು ಶರೀಅತ್ ವ್ಯಾಪ್ತಿಗೆ ಬರುವ ವಿಚಾರವಾಗಿದೆ. ಅದರ ಬಗ್ಗೆ ಬೆಂಗಳೂರಿನ ಕೆಲವು ಧರ್ಮಗುರುಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಕರಾವಳಿ ಭಾಗದ ವಿದ್ವಾಂಸರು ಕೂಡಾ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಶಾಫಿ ಸಅದಿ ಸ್ಪಷ್ಟಪಡಿಸಿದರು.