"ಸರ್ಫ್ರಾಝ್ ಖಾನ್ ಮತ್ತು ನನಗೆ ಭಾರತ ತಂಡಕ್ಕಾಗಿ ಕ್ರಿಕೆಟ್ ಆಡುವುದು, ತಂದೆಯನ್ನು ಖುಷಿಪಡಿಸುವುದಷ್ಟೇ ಗುರಿ"
ಮುಂಬೈ ರಣಜಿ ತಂಡಕ್ಕೆ ಆಯ್ಕೆಯಾದ 18ರ ಹರೆಯದ ಮುಶೀರ್ ಖಾನ್

Photo: indianexpress
ಹೊಸದಿಲ್ಲಿ: ಪೃಥ್ವಿ ಶಾ ನೇತೃತ್ವದ ತಂಡಕ್ಕೆ 18 ವರ್ಷದ ಮುಶೀರ್ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಿದ್ದಾರೆ. ಸಹೋದರರಾದ ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ ಮುಂಬೈ ರಣಜಿ ಟ್ರೋಫಿ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ ಮತ್ತು ಎಡಗೈ ಸ್ಪಿನ್ನರ್ ಆಗಿರುವ ಮುಶೀರ್, 19 ವರ್ಷದೊಳಗಿನವರ ಕೂಚ್ ಬೆಹಾರ್ ಟ್ರೋಫಿಯಲ್ಲಿ 67 ಸರಾಸರಿಯೊಂದಿಗೆ ಒಂಬತ್ತು ಪಂದ್ಯಗಳಲ್ಲಿ ಎರಡು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 670 ರನ್ ಗಳಿಸಿದ್ದಾರೆ. ಕಳೆದ ವರ್ಷ, ಅವರು ಎ ವಿಭಾಗದ ಪೊಲೀಸ್ ಶೀಲ್ಡ್ ಮತ್ತು ಮಾಧವ್ ಮಂತ್ರಿ ಏಕದಿನ ಪಂದ್ಯದಲ್ಲಿ, ಪಂದ್ಯ ಶ್ರೇಷ್ಠರಾಗಿ ಹೊರಹೊಮ್ಮಿದ್ದಾರೆ.
ಸರ್ಫರಾಜ್ ಖಾನ್ ಮತ್ತು ಮುಶೀರ್ ಖಾನ್ ತಂದೆ ಕೋಚ್, ಹೆಸರು ನೌಷಾದ್. ತನ್ನ ಮಕ್ಕಳನ್ನು ಶ್ರೇಷ್ಟ ಕ್ರಿಕೆಟಿಗರನ್ನಾಗಿ ಮಾಡಬೇಕೆಂಬುದು ನೌಷಾದ್ ರ ಬಹುದೊಡ್ಡ ಕನಸಾಗಿತ್ತು. ಕೋಚ್ ಆಗಿದ್ದ ನೌಷಾದ್ ಬಳಿ ಕ್ರಿಕೆಟಿಗನೊಬ್ಬ ಅನುಚಿತವಾಗಿ ವರ್ತಿಸಿದ್ದ. “ನನ್ನಲ್ಲಿ ಪ್ರತಿಭೆ ಇದ್ದದ್ದಕ್ಕೆ ನಾನು ಆಡುತ್ತಿದ್ದೇನೆ. ನಿಮಗೆ ಪ್ರತಿಭೆ ಇದ್ದರೆ ನಿಮ್ಮ ಮಕ್ಕಳನ್ನು ಆಡಿಸಿ ಜಗತ್ತಿಗೆ ತೋರಿಸಿ” ಎಂದು ಆ ಕ್ರಿಕೆಟಿಗ ಕೋಚ್ ನೌಷಾದ್ ಗೆ ಸವಾಲು ಹಾಕಿದ್ದ. ಇದು, ತನ್ನ ಮಕ್ಕಳನ್ನು ಹೇಗಾದರೂ ಶ್ರೇಷ್ಟ ಕ್ರಿಕೆಟಿಗರನ್ನಾಗಿ ಮಾಡಬೇಕೆಂಬ ಜಿದ್ದಿಗೆ ನೌಷಾದ್ರನ್ನು ತಳ್ಳಿತ್ತು.
ನಾನು ಮುಂಬೈ ಪರ ಆಡಿದಾಗ ಮ್ಯಾನೇಜರ್ಗೆ ಹೆಚ್ಚುವರಿ ಮುಂಬೈ ಕ್ಯಾಪ್ ನೀಡುವಂತೆ ವಿನಂತಿಸಿದ್ದೆ, ಅದು ನನ್ನ ಸಹೋದರನಿಗಾಗಿತ್ತು. ದೇವರು ದಯೆ ತೋರಿದ್ದಾನೆ. ಇದು ಅವನ (ಮುಶೀರ್) ಮತ್ತು ನನ್ನ ತಂದೆಯ ಪರಿಶ್ರಮದ ಫಲ. ನಮ್ಮನ್ನು ಕ್ರಿಕೆಟಿಗರನ್ನಾಗಿಸಲು (ತಂದೆ) ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ ಎಂದು ಸರ್ಫರಾಜ್ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವಲಯ ಶಿಬಿರಕ್ಕೆ ಆಯ್ಕೆಯಾದ ನಂತರ ಮುಶೀರ್ ಪ್ರಸ್ತುತ ಸೂರತ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
“ನನ್ನ ಸಹೋದರ ಸರ್ಫರಾಜ್ ಖಾನ್ ಮತ್ತು ನನಗೆ ಒಂದೇ ಒಂದು ಕನಸು ಇತ್ತು - ಭಾರತಕ್ಕಾಗಿ ಆಡುವುದು ಮತ್ತು ನನ್ನ ತಂದೆಯನ್ನು ಸಂತೋಷಪಡಿಸುವುದು. ಈ ಸುದ್ದಿ ಖಂಡಿತವಾಗಿಯೂ ನನಗೆ ಸಂತೋಷ ತಂದಿದೆ ಮತ್ತು ನಾನು ಆಯ್ಕೆದಾರರಿಗೆ ಮತ್ತು MCA ಗೆ ಕೃತಜ್ಞನಾಗಿದ್ದೇನೆ. ನಾನು ಇನ್ನೂ ಬಹಳ ದೂರ ಹೋಗಬೇಕಾಗಿದೆ ಮತ್ತು ಇನ್ನೂ ಸಾಕಷ್ಟು ಸಾಧಿಸುವುದು ಇದೆ, ”ಎಂದು ಮುಶೀರ್ ಖಾನ್ ಹೇಳಿದ್ದಾರೆ.
ಮುಶೀರ್ ಕ್ರಿಕೆಟ್ ಪಯಣವನ್ನು ಸ್ಮರಿಸಿದ ನೌಶಾದ್, “ಕ್ಲಬ್ ಪಯ್ಯಡೆ SC ಅವನನ್ನು 15 ನೇ ವಯಸ್ಸಿನಲ್ಲಿ ಹಿರಿಯ ಆಟಗಾರರ ವಿರುದ್ಧ ಆರಂಭಿಕ ಆಟಗಾರನನ್ನಾಗಿ ಮಾಡಲು ನಿರ್ಧರಿಸಿದಾಗ ಇದೆಲ್ಲವೂ ಪ್ರಾರಂಭವಾಯಿತು. ಅಲ್ಲಿಂದ ಅವನ ಆತ್ಮವಿಶ್ವಾಸ ಬೆಳೆಯಿತು” ಎಂದು ಹೇಳಿದ್ದಾರೆ.
“ಅಭ್ಯಾಸ ಅವಧಿಗಳ ಸಮಯದ ವಿಷಯದಲ್ಲಿ ನಾನು ಸರ್ಫರಾಜ್ನೊಂದಿಗೆ ಮಾಡಿದ ಅದೇ ತಪ್ಪುಗಳನ್ನು ಮುಶೀರ್ನೊಂದಿಗೆ ಮಾಡದಿರಲು ಪ್ರಯತ್ನಿಸಿದೆ. ಸರ್ಫ್ರಾಜ್ ಗೆ ಸಂಜೆ ನೆಟ್ಸ್ನಲ್ಲಿ ತರಬೇತಿ ನೀಡುತ್ತಿದ್ದೆವು, ಮುಂಬೈಯ ಹೊರಗೆ ಬೆಳಗಿನ ಪರಿಸ್ಥಿತಿಯಲ್ಲಿ ಕೆಂಪು ಚೆಂಡಿನೊಂದಿಗೆ ಸ್ವಲ್ಪ ಕಠಿಣವಾಗಿ ಹೋರಾಡಬೇಕಾಯಿತು. ಆ ತಪ್ಪನ್ನು ನಾನು ಅರಿತುಕೊಂಡೆ. ಆದ್ದರಿಂದ ಈಗ ನಾವು ಪಿಚ್ನಲ್ಲಿ ಇಬ್ಬನಿ ಇರುವಾಗ ಬೆಳಿಗ್ಗೆ ಅಭ್ಯಾಸ ಮಾಡುತ್ತೇವೆ. ಅದಕ್ಕಾಗಿಯೇ ಮುಶೀರ್ ವೇಗದ ಬೌಲರ್ಗಳನ್ನು ಸುಲಭವಾಗಿ ಎದುರಿಸುತ್ತಾರೆ” ಎಂದು ನೌಷಾದ್ ಖಾನ್ ವಿವರಿಸಿದ್ದಾರೆ.
ತನ್ನ ಇಬ್ಬರು ಪುತ್ರರು ಕ್ರಿಕೆಟಿಗರಾಗಿ ಬೆಳೆಯುವಲ್ಲಿ ನೌಷಾದ್ ಪ್ರಮುಖ ವ್ಯಕ್ತಿಯಾಗಿದ್ದಾರೆ, ಅವರ ಆಟದ ಮೇಲಿನ ಉತ್ಸಾಹವನ್ನು ಪ್ರೋತ್ಸಾಹಿಸಲು ನೌಷಾದ್ ಹಲವು ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ.
“ನಾವು ಕೊಳೆಗೇರಿಯಿಂದ ಬಂದಿದ್ದೇವೆ, ನನ್ನ ಮಕ್ಕಳು, ನಾನು ಶೌಚಾಲಯಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದೆವು. ನಾವು ಶೂನ್ಯದಿಂದ ಬಂದಿದ್ದೇವೆ, ಹಿಂದಿರುಗಿ ಹೋಗಲು ಏನೂ ಇಲ್ಲ” ಎಂದು ನೌಷಾದ್ ಹೇಳಿದ್ದಾರೆ.
ಕೃಪೆ: Indianexpress.com







