ಬೈಂದೂರು: ಕಲ್ಲಂಗಡಿ ಬೆಳೆ ಹಾನಿ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿ
ತೋಟಗಾರಿಕಾ ಇಲಾಖಾಧಿಕಾರಿಗಳಿಂದ ಬೆಳೆ ಹಾನಿಯ ಸರ್ವೇ ಕಾರ್ಯ

ಬೈಂದೂರು: ತಾಲೂಕಿನ ವಿವಿಧೆಡೆ ಅಕಾಲಿಕ ಮಳೆಯಿಂದ ಕಲ್ಲಂಗಡಿ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ನೇತೃತ್ವದಲ್ಲಿ ಕಂದಾಯ ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
‘ಅಕಾಲಿಕ ಮಳೆಗೆ ಕೊಚ್ಚಿಹೋದ ಕಲ್ಲಂಗಡಿ ಬೆಳೆ’ ಎಂಬ ತಲೆಬರಹದಲ್ಲಿ ಮೇ 24ರಂದು ವಾರ್ತಾಭಾರತಿಯಲ್ಲಿ ಕಲ್ಲಂಗಡಿ ಬೆಳೆಗಾರರ ಸಂಕಷ್ಟದ ಬಗ್ಗೆ ವಿಸ್ತೃತ ವರದಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ತಹಶಿಲ್ದಾರ್ ಸಹಿತ ಅಧಿಕಾರಿಗಳ ತಂಡ ಕಲ್ಲಂಗಡಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದೆ.
ತೋಟಗಾರಿಕಾ ಇಲಾಖಾಧಿಕಾರಿಗಳು ಕೆರ್ಗಾಲು ನಾಯ್ಕನಕಟ್ಟೆ, ನಾಗೂರು, ಹೇರೂರು, ಕಿರಿಮಂಜೇಶ್ವರ, ಉಪ್ಪುಂದ, ಅರೆಹೊಳೆ ಭಾಗಕ್ಕೆ ಭೇಟಿ ನೀಡಿ ಹಾನಿ ಪ್ರದೇಶ ವೀಕ್ಷಿಸಿ ಬೆಳೆ ನಾಶದ ವರದಿ ಸಂಗ್ರಹಿಸಿದೆ. ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಮಂಜುನಾಥ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಅಧಿಕಾರಿ ಪ್ರವೀಣ್ ಹಾಜರಿದ್ದರು.
ಮಳೆ ಆರಂಭದ ಹೊತ್ತಿಗೆ ಕಲ್ಲಂಗಡಿ ಬೆಳೆ ಹಾನಿಯಾದ 25 ಹೆಕ್ಟೇರ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದ ಆ್ಯಪ್‌ಗೆ ಸಂಬಂಧಪಟ್ಟ ವರದಿ ಅಪ್ಲೋಡ್ ಮಾಡಿದ್ದೇವೆ. ಆದರೆ ಕೆಲ ಪ್ರದೇಶದ ಹಾನಿ ಬಗ್ಗೆ ಮಾಹಿತಿ ಇರಲಿಲ್ಲ. ಗಮನಕ್ಕೆ ಬಂದ ತಕ್ಷಣ ಅಧಿಕಾರಿ, ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ತೋಟಗಾರಿಕಾ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಸರಕಾರದಿಂದ ಪ್ರಾಕೃತಿಕ ವಿಕೋಪ ನಿಧಿಯಡಿ ೧ ಹೆಕ್ಟೇರ್(೨.೫ ಎಕ್ರೆ) ಪ್ರದೇಶಕ್ಕೆ ೧೩,೫೦೦ ರೂ. ಪರಿಹಾರ ನೀಡಲಾಗುತ್ತದೆ. ಈವರೆಗೆ ೩೦ ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಹಾನಿ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಸರ್ವೇ ನಡೆಸಿ ಬೆಳೆಗಾರರಿಂದ ದಾಖಲಾತಿಗಳನ್ನು ಪಡೆದು ಪರಿಹಾರ ಪಾವತಿಗೆ ಅಗತ್ಯ ಕ್ರಮಕೈಗೊಳ್ಳಲಾ ಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಈ ವಾರದಲ್ಲಿ ಸಾಕಷ್ಟು ಮಳೆಯಾದ್ದರಿಂದ ಬೈಂದೂರು ತಾಲೂಕಿನ ಹಲವೆಡೆ ಕಲ್ಲಂಗಡಿ ಬೆಳೆ ಹಾಳಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕರು ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಯಮಾನುಸಾರವಾಗಿ ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ".
- ಶೋಭಾಲಕ್ಷ್ಮೀ ಎಚ್.ಎಸ್, ಬೈಂದೂರು ತಹಶಿಲ್ದಾರ್







