ಕೋರ್ಟ್‌ನಲ್ಲಿ ಬಾಕಿ ಕಡತ ವಿಲೇವಾರಿಗೆ ಮನ್ನಣೆ: ನ್ಯಾ.ಶಾಂತವೀರ್

ಉಡುಪಿ : ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜೂ.25ರಂದು ನಡೆಯುವ ರಾಷ್ಟ್ರೀಯ ಮೆಗಾ ಅದಾಲತ್‌ಗೆ ಹೆಚ್ಚಿನ ಆದ್ಯತೆ ಕೊಡ ಬೇಕು. ಈ ಮೂಲಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕಡತ ವಿಲೇವಾರಿಗೆ ಮನ್ನಣೆ ನೀಡಬೇಕಾಗಿದೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ನೆಲೆ ಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಮಂಗಳವಾರ ಸಂಘದ ಕಚೇರಿ ಯಲ್ಲಿ ನಡೆದ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು. ನ್ಯಾಯಾಧೀಶರು ಹಾಗೂ ವಕೀಲರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಒಬ್ಬರಿಗೊಬ್ಬರು ಪರಸ್ಪರ ಸಹಕಾರ, ನ್ಯಾಯ ಸಮ್ಮತವಾಗಿ ನಡೆದುಕೊಂಡಾಗ ಪ್ರಾಮಾಣಿಕತನದ ತೀರ್ಪು ಬರುವುದಕ್ಕೆ ಸಾಧ್ಯವಿದೆ ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ನಿರ್ಮಲಾ, ಮೂರನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ವಿನಾಯಕ ವಖಾಂಡೆ, ಜಿಲ್ಲಾ ನ್ಯಾಯಾ ಧೀಶ ರವೀಂದ್ರ ಹರಿ, ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶೆ ಶರ್ಮಿಳಾ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನ್ಯಾಯಾ ಧೀಶರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ವಕೀಲ ಅಶೋಕ್ ಎಸ್.ಬಿ. ಕಾರ್ಯಕ್ರಮ ನಿರೂಪಿಸಿದರು.