ಶಿಕ್ಷಣ ಸಚಿವ ನಾಗೇಶ್ ವಜಾಕ್ಕೆ ಎಚ್.ಎಂ.ವೆಂಕಟೇಶ್ ಆಗ್ರಹ

ಬೆಂಗಳೂರು, ಮೇ 24: ‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚಿಸಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ತಕ್ಷಣ ವಜಾಗೊಳಿಸಬೇಕು. ಜೊತೆಗೆ ಅರ್ಹತೆ ಇಲ್ಲದವರಿಗೆ ಪಠ್ಯ ಪರಿಷ್ಕರಣೆ ಹೊಣೆ ನೀಡಿದ ಶಿಕ್ಷಣ ಸಚಿವರಿಗೆ ಆ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಇಲ್ಲ. ಹೀಗಾಗಿ ತಕ್ಷಣ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ಮುಖ್ಯಮಂತ್ರಿ, ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.
ಮಂಗಳವಾರ ಪತ್ರ ಬರೆದಿರುವ ಅವರು, ‘ಪರಿಷ್ಕರಣೆ ಸಮಿತಿ ರಚನೆ ಮಾಡುವ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿರುವ ಶಿಕ್ಷಣ ತಜ್ಞರನ್ನು ಸಾಹಿತಿ, ವಿಮರ್ಶಕರು ಹಾಗೂ ಚಿಂತಕರು, ಮಕ್ಕಳ ಭವಿಷ್ಯಕ್ಕಾಗಿ ದುಡಿಯುತ್ತಿರುವ ಸಂಘಟನೆಗಳ ಮುಖ್ಯಸ್ಥರನ್ನು ನೇಮಿಸಬೇಕು. ಆದರೆ, ಅರ್ಹತೆ ಇಲ್ಲದ ಶಿಕ್ಷಣ ಕ್ಷೇತ್ರದ ಗಂಧಗಾಳಿ ತಿಳಿಯದ ಅರಿವು ಇಲ್ಲದ ಜಾಲತಾಣದ ಟ್ರೋಲರ್ ಕೆಲಸ ನಿರ್ವಹಿಸುತ್ತಿರುವ ಚಕ್ರತೀರ್ಥ ಮತ್ತು ಒಂದೇ ಸಮುದಾಯಕ್ಕೆ ಸೇರಿದ ತಂಡವನ್ನು ಆಯ್ಕೆ ಮಾಡಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮತ್ತು ಪೆÇೀಷಕರಿಗೆ ದಿಗ್ಬ್ರಮೆ ಉಂಟುಮಾಡಿದೆ' ಎಂದು ತಿಳಿಸಿದ್ದಾರೆ.
‘ಕುವೆಂಪು ಬರೆದ ನಾಡಗೀತೆಯನ್ನು ತಿರುಚಿ ಅವರಿಗೆ ಅವಮಾನ ಮಾಡಿರುವ, ಸುಳ್ಳನ್ನೇ ಸತ್ಯವಾಗಿಸುವ ಚಾಕಚಕ್ಯತೆಯುಳ್ಳ ನಿರ್ಲಜ್ಜ ವ್ಯಕ್ತಿ, ತಾಯಿ ಸ್ಥಾನದಲ್ಲಿ ನೋಡುವ ಮಹಿಳೆಯನ್ನು ನಿಂದಿಸಿ ಬರೆದಿರುವ ಬನ್ನಂಜೆ ಪಾಠವನ್ನು ಮತ್ತು ಸುಳ್ಳನ್ನು ವೈಭವೀಕರಿಸಿ ಕರ್ನಾಟಕದಾದ್ಯಂತ ಸಾರ್ವಜನಿಕರು ನೀಡಿದ ಬಿರುದು ಹೆಂಗ್ ಪುಂಗ್ಲಿ ಬರೆದ ಪಾಠವನ್ನು ಭಾರತದ ಭವಿಷ್ಯದ ನಾಯಕರಾಗುವ ಮಕ್ಕಳಿಗೆ ಬೋಧಿಸುವುದಕ್ಕೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಭಗತ್ ಸಿಂಗ್, ಟಿಪ್ಪುಸುಲ್ತಾನ್ ಪಾಠಗಳಿಗೆ ಕತ್ತರಿ ಆಡಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದೆ ಇರುವ ಮೇಲ್ಜಾತಿ ವೈಭವೀಕರಿಸುವ ಸಂಘಟನೆ ಹುಟ್ಟುಹಾಕಿದ ಹೆಡಗೆವಾರ್ ಮಾಡಿದ ಭಾಷಣವನ್ನು ಮಕ್ಕಳಿಗೆ ಬೋಧಿಸುವ, ಹಿಂದುಳಿದ ದಲಿತ ಸಮುದಾಯದ ಮತ್ತು ತುಳಿತಕ್ಕೊಳಗಾದ ಮಕ್ಕಳನ್ನು ಶಿಕ್ಷಣದಿಂದ ವಂಚಿಸುವ ಉದ್ದೇಶದಿಂದಲೇ ಜಿ.ರಾಮಕೃಷ್ಣ, ಕೆ.ನೀಲಾ, ಬಿ.ಟಿ.ಲಲಿತಾ ನಾಯಕ್ ಮತ್ತಿತರರು ಬರೆದಿರುವ ಪಾಠಗಳನ್ನು ಯಾವುದೇ ಕಾರಣ ನೀಡದೆ ತೆಗೆದು ಹಾಕಿರುವುದು ಪ್ರಜ್ಞಾವಂತ ನಾಗರಿಕರನ್ನು ಕೆರಳಿಸಿದೆ' ಎಂದು ಅವರು ತಿಳಿಸಿದ್ದಾರೆ.
‘ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳ ಪಠ್ಯ ಪರಿಷ್ಕರಣೆಯಲ್ಲಿ ಜಾತಿ, ರಾಜಕೀಯ ಇನ್ನಿತರ ಷಡ್ಯಂತ್ರಗಳನ್ನು ರೂಪಿಸದೆ ಶುದ್ಧ ಮನಸ್ಸಿನ, ಭಾರತದ ಸಮೃದ್ಧಿಗಾಗಿ ಚಿಂತಿಸುವವರನ್ನು ಹೊರಗಿಟ್ಟು, ಮಕ್ಕಳ ಪಾಠವನ್ನು ನಿರ್ಧರಿಸುವ ಕೆಲಸವನ್ನು ಅನರ್ಹ ವ್ಯಕ್ತಿಗಳ ಕೈಗೆ ನೀಡಿರುವುದು ಶಿಕ್ಷಣ ಸಚಿವರ ಎಡಬಿಡಂಗಿ ನಿರ್ಧಾರ. ಹೀಗಾಗಿ ಪರಿಷ್ಕರಣೆ ಸಮಿತಿ ರದ್ದು ಮಾಡಬೇಕು. ಜೊತೆಗೆ ಶಿಕ್ಷಣ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು' ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







