"ಲೈಂಗಿಕ ದೌರ್ಜನ್ಯಕ್ಕೊಳಗಾದ ಮಗುವಿನ ಹೆತ್ತವರು ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತಿಲ್ಲ"
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮಹತ್ವದ ತೀರ್ಪು

ಚಂಡಿಗಡ,ಮೇ 24: ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಮಗುವಿನ ಹೆತ್ತವರು ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಪೊಕ್ಸೊ ಕಾಯ್ದೆಯಡಿ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ.ಪಂಕಜ ಜೈನ ಅವರ ಪೀಠವು,ಒಪ್ಪಂದದ ಮೂಲಕ ಮಗುವಿನ ಘನತೆಯೊಂದಿಗೆ ರಾಜಿ ಮಾಡಿಕೊಳ್ಳಲು ಹೆತ್ತವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
2019ರಲ್ಲಿ ಐಪಿಸಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ವಿವಿಧ ಕಲಮ್ಗಳು ಹಾಗೂ ಪೊಕ್ಸೊ ಕಾಯ್ದೆಯಡಿ ಹಯಾಣದ ಸಿರ್ಸಾದ ಡಬ್ವಾಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪೊಕ್ಸೊ ಕಾಯ್ದೆಯಡಿ ದಂಡನೀಯ ಅಪರಾಧಗಳಿಗಾಗಿ ದಾಖಲಾದ ಎಫ್ಐಆರ್ನ್ನು ರಾಜಿಯ ಆಧಾರದಲ್ಲಿ ರದ್ದುಗೊಳಿಸುವಂತಿಲ್ಲ ಎಂದು ಹೇಳಿದ ಉಚ್ಚ ನ್ಯಾಯಾಲಯವು, ಮಗುವಿನ ಘನತೆಗೆ ಧಕ್ಕೆಯುಂಟಾಗುವಂತೆ ಮಗು ಮತ್ತು/ಅಥವಾ ಆಕೆಯ ಹೆತ್ತವರು ಮಾಡಿಕೊಂಡಿರುವ ರಾಜಿಯನ್ನು ಅದು ಕಾಯ್ದೆಯ ಉದ್ದೇಶವನ್ನೇ ವಿಫಲಗೊಳಿಸುವ ಮಟ್ಟಕ್ಕೆ ಏರಿಸಲು ಸಾಧ್ಯವಿಲ್ಲ. ಸಿಆರ್ಪಿಸಿಯ ಕಲಂ 482ರಡಿ ಎಫ್ಐಆರ್ಗಳನ್ನು ರದ್ದುಗೊಳಿಸಲು ಉಚ್ಚ ನ್ಯಾಯಾಲಯಗಳಿಗೆ ನೀಡಲಾಗಿರುವ ಅಧಿಕಾರವನ್ನು ಸಾಂವಿಧಾನಿಕ ಆದೇಶ ಮತ್ತು ಅಂತರರಾಷ್ಟ್ರೀಯ ನಿರ್ಣಯಗಳಿಂದ ಹೊರಹೊಮ್ಮುವ ಬಾಧ್ಯತೆಗಳಿಗೆ ಅನುಗುಣವಾಗಿ ಜಾರಿಗೊಳಿಸಲಾಗಿರುವ ಕಾನೂನಿನ ಉದ್ದೇಶವನ್ನು ವಿಫಲಗೊಳಿಸಲು ಬಳಸುವಂತಿಲ್ಲ ಎಂದು ಹೇಳಿದೆ.
ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮತ್ತು ಆರು ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆಯೂ ಉಚ್ಚ ನ್ಯಾಯಾಲಯವು ಸಂಬಂಧಿಸಿದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶ ನೀಡಿದೆ.







