ತಿರುವೈಲು ಸ್ಮಶಾನ ನಿರ್ಮಿಸಲು ಡಿವೈಎಫ್‌ಐ ಮನವಿ

ಮಂಗಳೂರು : ಮಹಾನಗರ ಪಾಲಿಕೆಯ ತಿರುವೈಲು ವಾರ್ಡ್‌ನ ಕೆತ್ತಿಕಲ್ ಎಂಬಲ್ಲಿ ಸ್ಮಶಾನ ನಿರ್ಮಿಸಬೇಕು ಎಂದು ಡಿವೈಎಫ್‌ಐ ಮತ್ತು ಕರ್ನಾಟಕ ಪ್ರಾಂತ ಸಂಘದ ವಾಮಂಜೂರು ಪ್ರದೇಶ ಸಮಿತಿಯು ಮಂಗಳವಾರ ದ.ಕ. ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸಲ್ಲಿಸಿತು.
ಮನಪಾ ಇಲ್ಲಿ ಸ್ಮಶಾನ ನಿರ್ಮಿಸಲು ಮುಂದಾಗಿದ್ದರೂ ಕೆಲವು ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಸ್ಥಳೀಯರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸಮರ್ಪಕವಾಗಿ ಸ್ಮಶಾನ ನಿರ್ಮಿಸಬೇಕು. ಇದಕ್ಕೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ತಿರುವೈಲು ಗ್ರಾಪಂ ವ್ಯಾಪ್ತಿಯಲ್ಲಿರುವಾಗಲೇ ಸ್ಮಶಾನದ ಬೇಡಿಕೆಯಿತ್ತು. ಈ ಪ್ರದೇಶವು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರಿ ೧೫ ವರ್ಷಗಳು ಕಳೆದರೂ ಕೂಡ ಇನ್ನೂ ಈಡೇರಿಲ್ಲ. ತಿರುವೈಲು ಗ್ರಾಮದ ಕೆತ್ತಿಕಲ್ ಎಂಬಲ್ಲಿ ಸರ್ವೆ ನಂಬರ್ ೭೪ರ ಪೈಕಿ ೪ರಲ್ಲಿರುವ ಸರಕಾರಿ ಜಾಗದಲ್ಲಿ ಸ್ಮಶಾನವನ್ನು ನಿರ್ಮಿಸಲು ಮಹಾ ನಗರ ಪಾಲಿಕೆಯು ಐದು ಲಕ್ಷ ಅನುದಾನವನ್ನು ಮಂಜೂರು ಮಾಡಿದರೂ ಸ್ಥಳೀಯ ಕೆಲವರಿಂದಾಗಿ ಈ ಕೆಲಸಕ್ಕೆ ತೊಂದರೆಯಾಗುತ್ತಿದೆ. ಸ್ಮಶಾನವು ತಿರುವೈಲು ಗ್ರಾಮಕ್ಕೆ ಅವಶ್ಯಕವಾಗಿ ಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಗುರುಪುರ ವಲಯ ಅಧ್ಯಕ್ಷ ಬಾಬು ಸಾಲಿಯಾನ್. ಮುಖಂಡರಾದ ಹೊನ್ನಯ್ಯ ಅಮೀನ್, ಡಿವೈಎಫ್‌ಐ ಮುಖಂಡರಾದ ಮನೋಜ್ ವಾಮಂಜೂರು, ಸಂತೋಷ್ ಬಜಾಲ್, ಯೋಗೀಶ್, ಸುರೇಶ್, ಉಪಸ್ಥಿತರಿದ್ದರು.