ಉಯಿಘರ್ ಮುಸ್ಲಿಮರ ಮೇಲೆ ಚೀನಾದ ವ್ಯವಸ್ಥಿತ ದೌರ್ಜನ್ಯ: ಬೆಚ್ಚಿಬೀಳಿಸುವ ಮಾಹಿತಿ, ಫೋಟೊಗಳು ಬಹಿರಂಗ
![ಉಯಿಘರ್ ಮುಸ್ಲಿಮರ ಮೇಲೆ ಚೀನಾದ ವ್ಯವಸ್ಥಿತ ದೌರ್ಜನ್ಯ: ಬೆಚ್ಚಿಬೀಳಿಸುವ ಮಾಹಿತಿ, ಫೋಟೊಗಳು ಬಹಿರಂಗ ಉಯಿಘರ್ ಮುಸ್ಲಿಮರ ಮೇಲೆ ಚೀನಾದ ವ್ಯವಸ್ಥಿತ ದೌರ್ಜನ್ಯ: ಬೆಚ್ಚಿಬೀಳಿಸುವ ಮಾಹಿತಿ, ಫೋಟೊಗಳು ಬಹಿರಂಗ](https://www.varthabharati.in/sites/default/files/images/articles/2022/05/24/336349-1653416923.jpg)
ಬೀಜಿಂಗ್: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದ ಪೊಲೀಸ್ ಸೇವೆಗಳ ಕಂಪ್ಯೂಟರ್ ಗಳಿಂದ ಹ್ಯಾಕ್ ಮಾಡಿದ ಡೇಟಾವು ಈ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಸಲಾದ ದೌರ್ಜನ್ಯವನ್ನು ಬಹಿರಂಗಪಡಿಸಿದೆ. ಡೇಟಾವು ಕ್ಸಿನ್‌ಜಿಯಾಂಗ್‌ನಲ್ಲಿನ ʼಬಂಧನ ಕೇಂದ್ರಗಳʼ ಅತ್ಯಂತ ಗೌಪ್ಯ ಫೋಟೋಗಳು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸುವವರನ್ನು ಗುಂಡಿಕ್ಕಿ ಕೊಲ್ಲುವ ನೀತಿ ಸೇರಿದಂತೆ ಹಲವು ಮಾಹಿತಿಯನ್ನು ಬಹಿರಂಗಪಡಿಸಿದೆ.
ಅಳುತ್ತಿರುವ ಉಯಿಘರ್ ಮಹಿಳೆಯ ಭಾವಚಿತ್ರವು ಚೀನಾದ ಕಾನ್ಸಂಟ್ರೇಶನ್ ಕ್ಯಾಂಪ್‌ಗಳ ಹೃದಯ ವಿದ್ರಾವಕ ವಾಸ್ತವವನ್ನು ಬಹಿರಂಗಪಡಿಸಿದ್ದು, ಬೀಜಿಂಗ್ ತನ್ನ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂಬ ದೀರ್ಘಕಾಲದ ಆರೋಪಕ್ಕೆ ಸೋರಿಕೆಯಾದ ಈ ಮಾಹಿತಿಯು ಪುಷ್ಟಿ ನೀಡಿದೆ.
(Picture: Xinjiang Police Files/Dr Adrian Zenz)
“ಕ್ಸಿನ್‌ಜಿಯಾಂಗ್ ಪೊಲೀಸ್ ಫೈಲ್” ಎಂದು ಕರೆಯಲ್ಪಡುವ ಈ ಅಂಕಿಅಂಶಗಳು ಈ ವರ್ಷದ ಆರಂಭದಲ್ಲಿ ಬಿಬಿಸಿಗೆ ಲಭ್ಯವಾಗಿದೆ. ಹಲವು ತಿಂಗಳು ತನಿಖೆ ಮಾಡಿ ದೃಢೀಕರಿಸಿದ ನಂತರ, ಇದನ್ನು ಬಹಿರಂಗಪಡಿಸಲಾಗಿದೆ. ಹ್ಯಾಕ್ ಮಾಡಲಾದ ಫೈಲ್‌ಗಳು 2018 ರ ಜನವರಿ ಮತ್ತು ಜುಲೈ ನಡುವೆ ತೆಗೆದ ಉಯ್ಘರ್‌ಗಳ 5,000 ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಒಳಗೊಂಡಿವೆ. ಇವರಲ್ಲಿ ಕನಿಷ್ಠ 2,884 ಜನರನ್ನು ಭಯೋತ್ಪಾದನೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ಉಳಿದವರನ್ನು ಯಾವುದೇ ಆರೋಪಗಳಿಲ್ಲದೆ ಕಾನ್ಸಂಟ್ರೇಷನ್ ಕ್ಯಾಂಪಿನಲ್ಲಿ ಕೂಡಿ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಸ್ಲಿಂ-ಬಹುಸಂಖ್ಯಾತ ದೇಶಗಳಿಗೆ ಪ್ರಯಾಣಿಸುವುದು, ಗಡ್ಡವನ್ನು ಬೆಳೆಸುವುದು ಮತ್ತು 'ಬಲವಾದ ಧಾರ್ಮಿಕ ಒಲವು' ಹೊಂದಿರುವವರ ಸಂಬಂಧಿಕರಾಗಿರುವುದು ಸೇರಿದಂತೆ ಧಾರ್ಮಿಕತೆ ಪಾಲಿಸುವ 'ಅಪರಾಧಗಳಿಗೆ' ದೀರ್ಘಾವಧಿಯ ಶಿಕ್ಷೆಯನ್ನು ನೀಡಲಾಗಿದೆ.
ಪ್ರಾರ್ಥನಾ ಚಾಪೆಗಳು (ಮುಸಲ್ಲ), ಧಾರ್ಮಿಕ ಪಠ್ಯಗಳು, ಕುರ್‌ಆನ್ ನ ಕೈಬರಹ (ಕ್ಯಾಲಿಗ್ರಫಿ), ಹಿಜಾಬ್‌ಗಳು, ಉದ್ದನೆಯ ಉಡುಪುಗಳು ಮತ್ತು ಉಯ್ಘರ್ ಭಾಷಾ ಅಭ್ಯಾಸಗಳನ್ನು ಒಳಗೊಂಡಿರುವ ಪ್ರಾಥಮಿಕ ಶಾಲಾ ನೋಟ್‌ಬುಕ್ ಸೇರಿದಂತೆ ಹಲವು ಧಾರ್ಮಿಕ ವಸ್ತುಗಳನ್ನು "ಅಕ್ರಮ" ಎಂದು ಪೊಲೀಸರು ವಶಪಡಿಸಿಕೊಂಡಿರುವುದು “ಕ್ಸಿನ್‌ಜಿಯಾಂಗ್ ಪೊಲೀಸ್ ಫೈಲ್”ಗಳಲ್ಲಿ ದಾಖಲಾಗಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಶೆಲೆಟ್ ಅವರು ಕ್ಸಿನ್‌ಜಿಯಾಂಗ್‌ಗೆ ಭೇಟಿ ನೀಡಲು ಚೀನಾಕ್ಕೆ ಆಗಮಿಸಿರುವ ಸಮಯದಲ್ಲಿಯೇ ಇವುಗಳನ್ನು ಪ್ರಕಟಿಸಲಾಗಿದೆ. ಆದಾಗ್ಯೂ, ಅವರ ಭೇಟಿಯನ್ನು ಸರ್ಕಾರವು ಬಿಗಿಯಾಗಿ ನಿಯಂತ್ರಿಸುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
(Picture: Xinjiang Police Files/Dr. Adrian Zenz)
“ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ದಕ್ಷಿಣ ನಗರವಾದ ಗುವಾಂಗ್‌ಝೌನಲ್ಲಿ ಮೈಕೆಲ್ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಅವರು ಗುವಾಂಗ್‌ಝೌದಿಂದ ಕಾಶ್ಗರ್ ಮತ್ತು ಕ್ಸಿನ್‌ಜಿಯಾಂಗ್‌ನ ರಾಜಧಾನಿ ಉರುಂಕಿಗೆ ಪ್ರಯಾಣಿಸುತ್ತಾರೆ.” ಎಂದು ವರದಿಯಾಗಿದೆ.
2017 ರಲ್ಲಿ ಕ್ಸಿನ್‌ಜಿಯಾಂಗ್ ಪ್ರದೇಶದಾದ್ಯಂತ ಮರು-ಶಿಕ್ಷಣ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಚೀನಾ ಸರ್ಕಾರ ಹೇಳಿಕೊಂಡಿದೆ. ಈ ಕೇಂದ್ರಗಳನ್ನು ಶಿಕ್ಷಣ ಕೇಂದ್ರಗಳು ಎಂದು ಚೀನಾ ವಿವರಿಸಿದರೂ ಕ್ಸಿನ್‌ಜಿಯಾಂಗ್‌ನ ಬಂಧನ ಕೇಂದ್ರಗಳಲ್ಲಿ ಲಕ್ಷಾಂತರ ಉಯಿಘರ್‌ಗಳನ್ನು ಬಂಧಿಯಾಗಿಟ್ಟು ಚಿತ್ರಹಿಂಸೆ ನೀಡಲಾಗಿದೆ ಎಂಬ ವರದಿಗಳಿವೆ.
ಇವು ಶಾಲೆಗಳಲ್ಲದೆ ಬೇರೇನೂ ಅಲ್ಲ ಎಂದು ಚೀನಾ ಹೇಳಿತ್ತಾದರೂ, ಅಲ್ಲಿಂದ ಲಭ್ಯವಾಗಿರುವ ಆಂತರಿಕ ಕಡತಗಳು ಚೀನಾದ ವಾದವನ್ನು ಅಲ್ಲಗೆಳೆಯುತ್ತಿದೆ.
ನ್ಯೂಯಾರ್ಕ್ ಮೂಲದ ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ ಹತ್ತಾರು ಹಕ್ಕುಗಳ ಗುಂಪುಗಳು, ಚೀನಾ ಸರ್ಕಾರವು ಸತ್ಯವನ್ನು ಮರೆಮಾಚಲು ಉಯಿಘರ್‌ಗಳು ಮತ್ತು ಇತರ ಟರ್ಕಿಕ್ ಗುಂಪುಗಳ ಸದಸ್ಯರ ವಿರುದ್ಧ ಸಾಮೂಹಿಕ ಬಂಧನ, ಚಿತ್ರಹಿಂಸೆ ಮತ್ತು ಇತರ ಅಪರಾಧಗಳ ಸಮಗ್ರ ಮತ್ತು ವ್ಯವಸ್ಥಿತ ನೀತಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದೆ.
(Picture: Xinjiang Police Files/Dr. Adrian Zenz)
BREAKING: huge trove of files obtained by hacking into Xinjiang police / re-education camp computers contain first-ever image material from inside camps, reveal Chen Quanguo issuing shoot-to-kill orders, Xi Jinping demanding new camps because existing ones are overcrowded. pic.twitter.com/6K19Wxf0Lx
— Adrian Zenz (@adrianzenz) May 24, 2022