ಕೋಕಾಕೋಲಾ ಬಾಟ್ಲಿಂಗ್ ಘಟಕಕ್ಕೆ 15.09 ಕೋ.ರೂ. ದಂಡ ವಿಧಿಸಿದ್ದ ಎನ್‌ಜಿಟಿ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ, ಮೇ 24: ಉತ್ತರ ಭಾರತದಲ್ಲಿ ಅಮೆರಿಕ ಮೂಲದ ಕೋಕಾಕೋಲಾ ಪಾನೀಯದ ಪ್ರಮುಖ ಬಾಟ್ಲಿಂಗ್ ಘಟಕವಾಗಿರುವ ಮೂನ್ ಬಿವರೇಜಸ್ ಗೆ 15.09 ಕೋ.ರೂ.ದಂಡ ವಿಧಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ)ದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆ ನೀಡಿದೆ.
ಎನ್ಜಿಟಿ ತನಗೆ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ಮೂನ್ ಬಿವರೇಜಸ್ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಗಾಝಿಯಾಬಾದ್ ನಿವಾಸಿ ಸುಶೀಲ್ ಭಟ್ ಗೆ ನೋಟಿಸನ್ನು ಹೊರಡಿಸಿದೆ. ಭಟ್ ಅವರ ದೂರಿನ ಮೇರೆಗೆ ದಿಲ್ಲಿಯಲ್ಲಿರುವ ಎನ್ಜಿಟಿಯ ಪ್ರಧಾನ ಪೀಠವು 2022, ಫೆ.25ರಂದು ಮೂನ್ ಬಿವರೇಜಸ್ಗೆ ದಂಡವನ್ನು ವಿಧಿಸಿ ಆದೇಶಿಸಿತ್ತು.
ಎನ್ಜಿಟಿಯು ಮೂನ್ ಬಿವರೇಜಸ್ ನ ಗ್ರೇಟರ್ ನೊಯ್ಡ ಘಟಕಕ್ಕೆ 1.85 ಕೋ.ರೂ. ಮತ್ತು ಸಾಹಿಬಾಬಾದ್ ಘಟಕಕ್ಕೆ 13.24 ಕೋ.ರೂ. ಹಾಗೂ ವರುಣ ಬಿವರೇಜಸ್ ನ ಗ್ರೇಟರ್ ನೊಯ್ಡ ಘಟಕಕ್ಕೆ 9.71 ಕೋ.ರೂ.ಗಳ ದಂಡಗಳನ್ನು ವಿಧಿಸಿತ್ತು.
ಪರಿಸರ ಮತ್ತು ಜಲಶಕ್ತಿ ಸಚಿವಾಲಯಗಳು, ಕೇಂದ್ರ ಅಂತರ್ಜಲ ಪ್ರಾಧಿಕಾರ ಮತ್ತು ಉತ್ತರ ಪ್ರದೇಶ ಅಂತರ್ಜಲ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸಿದ್ದ ಎನ್ಜಿಟಿ, ಅಂತರ್ಜಲ ಬಳಕೆಯನ್ನು ಕಡಿಮೆಗೊಳಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಯೋಜನೆಯೊಂದನ್ನು ಎರಡು ತಿಂಗಳುಗಳಲ್ಲಿ ಸಿದ್ಧಗೊಳಿಸುವಂತೆ ಮತ್ತು ಮುಂದಿನ ಆರು ತಿಂಗಳುಗಳಲ್ಲಿ ಅದನ್ನು ಜಾರಿಗೊಳಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಿತ್ತು.
ಅಂತರ್ಜಲದ ತೀವ್ರ ಕೊರತೆಯಿರುವ ಪ್ರದೇಶಗಳಲ್ಲಿಯೂ ಅದನ್ನು ವಿವೇಚನಾರಹಿತವಾಗಿ ಮತ್ತು ಅನಿಯಂತ್ರಿತವಾಗಿ ಹೊರತೆಗೆಯಲಾಗುತ್ತಿದೆ ಎಂದು ದೂರಿ ಭಟ್ ಎನ್ಜಿಟಿಗೆ ದೂರು ಸಲ್ಲಿಸಿದ್ದರು. ಅಂತರ್ಜಲವನ್ನು ತೆಗೆಯಲು ಈ ಕಂಪನಿಗಳು ಕೇಂದ್ರ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆದಿಲ್ಲ ಎಂದು ಅವರು ಆರೋಪಿಸಿದ್ದರು.