VIDEO- ಒಬಿಸಿ ಮೀಸಲಾತಿ ಮಾತ್ರವಲ್ಲ, ಎಲ್ಲ ಮೀಸಲಾತಿಗಳಿಗೂ ಗಂಡಾಂತರವಿದೆ: ನಾಗಮೋಹನ್ ದಾಸ್

ಬೆಂಗಳೂರು, ಮೇ 24: ಸುಪ್ರೀಂ ತೀರ್ಪಿನ ಹಿನ್ನೆಲೆ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಇಳಿಸಲಾಗಿದೆ. ಹಾಗಾದರೆ ಶೇ.6ರಷ್ಟನ್ನು ಎಲ್ಲಿ ಕಡಿತ ಮಾಡಲಾಗಿದೆ ಎಂದು ನೋಡಿದರೆ, ಒಬಿಸಿಗಳ ಮೀಸಲಾತಿಯ ಶೇ.36ರನ್ನು ಶೇ.27ಕ್ಕೆ ಇಳಿಸಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಶಾಸಕರ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯು ಏರ್ಪಡಿಸಿದ್ದ `ಒಬಿಸಿ ಮೀಸಲಾತಿ ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪು: ಸವಾಲುಗಳು- ಸಾಧ್ಯತೆಗಳು’ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, 1993ರಲ್ಲಿ ಪಂಚಾಯತ್‍ರಾಜ್ ಜಾರಿಯಾದ ನಂತರ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಸೇರಿದಂತೆ ಒಬಿಸಿಗೆ ಮೀಸಲಾತಿ ನೀಡಲಾಗಿದ್ದು, ಶೇ.18 ಮೀಸಲಾತಿಯನ್ನು ಎಸ್‍ಸಿಗಳಿಗೆ, ಶೇ.5 ಮೀಸಲಾತಿಯನ್ನು ಎಸ್‍ಟಿಗಳಿಗೆ, ಶೇ.33 ಮೀಸಲಾತಿಯನ್ನು ಒಬಿಸಿಗಳಿಗೆ ಸೇರಿ ಒಟ್ಟು ಶೇ.56 ಮೀಸಲಾತಿಯನ್ನು ಪಂಚಾಯತ್‍ರಾಜ್‍ನಲ್ಲಿ ನೀಡಲಾಗಿದೆ. ಇದೇ ರೀತಿ ಬೇರೆ ರಾಜ್ಯಗಳಲ್ಲೂ ಮೀಸಲಾತಿ ನೀಡಲಾಗಿದ್ದು, ಅಲ್ಲೂ ಕೂಡಾ ಮೀಸಲಾತಿ ಮಿತಿ ಶೇ.50ನ್ನು ದಾಟಿದೆ ಎಂದು ವಿವರ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ಸದಸ್ಯತ್ವಕ್ಕೆ ಮಾತ್ರ ಮೀಸಲಾತಿ ಅನ್ವಯವಾಗುವುದಿಲ್ಲ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪರಿಶಿಷ್ಟರು ಮತ್ತು ಒಬಿಸಿಗೆ ಮೀಸಲಾತಿ ನೀಡಲಾಗಿತ್ತು. ಇದರ ಜತೆಗೆ ಮಹಿಳಾ ಮೀಸಲಾತಿಯನ್ನೂ ಜಾರಿ ಮಾಡಿಕೊಂಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೀಸಲಾತಿ ಶೇ.50 ಮೀರಿದಾಗ ಸುಪ್ರೀಂಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಕೆ.ಕೃಷ್ಣಮೂರ್ತಿ ಹಾಗೂ ಯೂನಿಯನ್ ಆಫ್ ಇಂಡಿಯಾ ಪ್ರಕರಣ ನಮ್ಮ ಮುಂದಿದೆ ಎಂದು ಹೇಳಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳ ಪೀಠ, 2010ರಲ್ಲಿ ತೀರ್ಪು ನೀಡಿ, ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿರುವುದು ಹಾಗೂ ಸದಸ್ಯ ಸೇರಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನೀಡಿರುವುದು ಕಾನೂನಾತ್ಮಕವಾಗಿದೆ ಎಂದು ಹೇಳಿತ್ತು. ಆದರೆ, ಈ ತೀರ್ಪಿನಲ್ಲಿ ಸುಪ್ರೀಂ ಕೆಲವು ಷರತ್ತು ವಿಧಿಸಿತ್ತು ಎಂದರು.
ಮುಂದಿನ ಚುನಾವಣೆಗಳಲ್ಲಿ ರಾಜ್ಯ ಆಯೋಗ ರಚನೆ ಮಾಡಿ, ಮಾಹಿತಿ ಸಂಗ್ರಹ ಮಾಡಬೇಕು. ರಾಜಕೀಯವಾಗಿ ಹಿಂದುಳಿದಿರುವ ಜಾತಿಗಳನ್ನು ಗುರುತಿಸಿ ಮೀಸಲಾತಿ ವರ್ಗೀಕರಣ ಮಾಡಬೇಕು. ಯಾವ ಜಾತಿಯ ಜತೆಗೆ ಯಾರನ್ನು ಹಾಕಬೇಕು ಎಂದು ತೀರ್ಮಾನ ಮಾಡಬೇಕು. ಹೀಗೆ ಯಾವ ಸಮುದಾಯಕ್ಕಾದರೂ ಮೀಸಲಾತಿ ನೀಡಬಹುದು ಆದರೆ, ಒಟ್ಟು ಮೀಸಲಾತಿ ಶೇ.50 ಮೀರಬಾರದು ಎಂದು ಷರತ್ತು ವಿಧಿಸಿದೆ ಎಂದು ಹೇಳಿದರು.
ಭಾರತದ ಸಂವಿಧಾನದಲ್ಲಿ ಹಲವು ಮೂಲ ತತ್ವಗಳಿವೆ. ಭಾರತ ಸಾರ್ವಭೌಮತ್ವ ಒಂದು ಮೂಲ ತತ್ವ, ಸಂವಿಧಾನ ಶ್ರೇಷ್ಠ ಎನ್ನುವುದು ಒಂದು ಮೂಲಭೂತ ತತ್ವ, ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯ ಎನ್ನುವುದು ಕೂಡಾ ಮೂಲಭೂತ ತತ್ವ. ಈ ರೀತಿ ಅನೇಕ ಮೂಲ ತತ್ವಗಳಲ್ಲಿ ಕಾಲ ಕಾಲಕ್ಕೆ ಚುನಾವಣೆ ನಡೆಸುವುದು ಭಾರತದ ಮೂಲ ತತ್ವ ಎಂದು ಹೇಳಿದೆ. ಅವಧಿ ಮುಗಿದಿರುವ ಎಲ್ಲ ಚುನಾವಣೆಗಳನ್ನು ನಡೆಸಿ, ರಾಜ್ಯ ಸರಕಾರ ತನ್ನ ಜವಾಬ್ದಾರಿಯನ್ನು ತೋರಿಸಬೇಕು ಎಂದು ಸಲಹೆ ನೀಡಿದರು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿ, ನ್ಯಾಯಾಲಯದ ತಡೆ ಆದೇಶಗಳನ್ನಿಟ್ಟುಕೊಂಡು ಬಿಬಿಎಂಪಿ ಚುನಾವಣೆ ನಡೆಸುತ್ತಿಲ್ಲ. ಆದರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೆ ಖಾಲಿ ಬಿಡಬಾರದು ಎಂಬ ಆದೇಶವಿದೆ. ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ರಚನೆಯಾಗಿರುವ ಡಾ. ಭಕ್ತವತ್ಸಲಂ ಎಂಟು ವಾರಗಳಲ್ಲಿ ಮುಗಿಸಬೇಕು ಎಂದರೂ, ಸರಕಾರ ಈ ಸಮಿತಿಗೆ ಯಾವುದೇ ಕಾಲಮಿತಿ ಮತ್ತು ಷರತ್ತುಗಳನ್ನು ನಿಗದಿಪಡಿಸಿಲ್ಲ ಎಂದು ಹೇಳಿದರು.
ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಸರಕಾರ, ಬಿಬಿಎಂಪಿ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ. ಒಬಿಸಿ ಸೇರಿದಂತೆ ಎಲ್ಲ ಸಮುದಾಯದವರೂ ಚುನಾವಣೆ ನಡೆಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ರಾಜ್ಯ ಅಲೆಮಾರಿ ಸಮುದಾಯದ ಮುಖಂಡ ರಂಗಪ್ಪ ಮಾತನಾಡಿ, ನಮ್ಮ ದೊಂಬಿದಾಸ ಸಮುದಾಯ ಕೆಟಗರಿ-1ರಲ್ಲಿ ಬರುತ್ತದೆ. ಬೆಸ್ತ, ಗೊಲ್ಲ, ಉಪ್ಪಾರ ಸೇರಿದಂತೆ ಹಲವು ಪ್ರಬಲ ಸಮುದಾಯಗಳ ಜತೆಗೆ ನಾವು ಸ್ಪರ್ಧೆ ಮಾಡಬೇಕಿದೆ. ಉಳಿದ ಜಾತಿಗಳ ಮುಂದೆ ಈ ಸಮುದಾಯಗಳು ಅಷ್ಟೇನೂ ಪ್ರಬಲರಲ್ಲ. ಆದರೆ, ನಾವು ಅವರ ಜತೆಗೆ ಸಂಘರ್ಷಕ್ಕೆ ಇಳಿಯುವ ವಾತವರಣವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಹಸಿವಿನ ಅನುಭವ ಇಲ್ಲದ, ಆದರೆ ಒಬಿಸಿ ಮೀಸಲಾತಿ ಪಡೆದವರು ಮತ್ತು ಪಡೆಯುತ್ತಿರುವ ನೂರಾರು ಸಮುದಾಯಗಳು ಒಬಿಸಿ ಮೀಸಲಾತಿ ಹೋರಾಟದ ಜತೆಗೆ ಕೆಲಸ ಮಾಡುತ್ತಿಲ್ಲ. ಏಕೆಂದರೆ, ನ್ಯಾ. ನಾಗಮೋಹನ್ ದಾಸ್ ಮೀಸಲಾತಿ ವರ್ಗೀಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ವರ್ಗೀಕರಣ ಆಗದೆ ಇದ್ದರೆ ಒಬಿಸಿಯ ಬಂಡವಾಳಶಾಹಿಗಳು ಎಲ್ಲ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ದೊಂಬಿದಾಸರು, ಎಳವರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಂ.ಸಿ. ವೇಣುಗೋಪಾಲ್ ಮಾತನಾಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇಟ್ಟುಕೊಂಡು ಬೆಂಬಲ ನೀಡುತ್ತಿರುವುದು ನಮ್ಮ ಸೌಭಾಗ್ಯವಾಗಿದ್ದು, ಒಬಿಸಿ ಮೀಸಲಾತಿ ಬಗ್ಗೆ ನಡೆಯುತ್ತಿರುವ ಹೋರಾಟಕ್ಕೆ ನಾಗಮೋಹನ್ ದಾಸ್ ಸಲಹೆ ನೀಡಬೇಕು. ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳಲ್ಲಿ ನಾವು ನಡೆಸುವ ಹೋರಾಟಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಮಾನವ ಬಂಧುತ್ವ ವೇದಿಕೆ ಮುಖಂಡ ಹೈಕೋರ್ಟ್ ವಕೀಲ ಅನಂತ್ ನಾಯ್ಕ್ ಸೇರಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.







