ಸುಳ್ಯದಲ್ಲಿ ಮುಂದುವರಿದ ವಿದ್ಯುತ್ ಸಮಸ್ಯೆ
ಸುಳ್ಯ: ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಮುಂದುವರಿದಿದ್ದು, ಮಂಗಳವಾರ ರಾತ್ರಿ ವಿದ್ಯುತ್ ಕಣ್ಣಾಮುಚ್ಚಾಲೆ ಯಾಡುತಿದೆ. ಸಂಜೆ 6 ರಿಂದ ರಾತ್ರಿ 10.30ರ ಮಧ್ಯೆ ಹತ್ತಾರು ಬಾರಿ ವಿದ್ಯುತ್ ಕಡಿತವಾಗಿದೆ. ವಿದ್ಯುತ್ ಸಂಪರ್ಕ ನೀಡಿದರೂ ಕೆಲವೇ ನಿಮಿಷದಲ್ಲಿ ಕಡಿತವಾಗುತ್ತಿದೆ. ಗಂಟೆ ಬಿಟ್ಟು ಸಂಪರ್ಕ ನೀಡಿದರೂ ಮತ್ತೆ ಅದೇ ಕಣ್ಣಾ ಮುಚ್ಚಾಲೆಯಾಟ ಮುಂದುವರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ದುರಸ್ತಿಯ ಹಿನ್ನಲೆಯಲ್ಲಿ ಹಗಲಿನ ವೇಳೆಯೂ ದಿನ ಪೂರ್ತಿ ವಿದ್ಯುತ್ ಕಡಿತ ಮಾಡಲಾಗಿತ್ತು. ಸಂಜೆಯ ವೇಳೆಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದರೂ ಪದೇ ಪದೇ ಕಡಿತಗೊಳ್ಳುವ ಕಾರಣ ಜನತೆ ರೋಸಿ ಹೋಗಿದ್ದಾರೆ.
ಪದೇ ಪದೇ ವಿದ್ಯುತ್ ಕಡಿತಗೊಳ್ಳುವ ಕಾರಣ ಟಿವಿ ಮತ್ತಿತರ ಗೃಹೋಪಯೋಗಿ ವಸ್ತುಗಳಿಗೂ ಹಾನಿಯಾಗುವ ಸಂಭವ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಹಗಲಿನ ವೇಳೆಯೂ ವಿದ್ಯುತ್ ಇಲ್ಲದ ಕಾರಣ ಇನ್‌ವರ್ಟರ್ ಇದ್ದ ಮನೆಗಳಲ್ಲೂ ಬ್ಯಾಟರಿ ಖಾಲಿಯಾಗಿದೆ ಎಂದು ಸಾರ್ವಜನಿಕರು ಹೇಳಿದ್ದು, ಹಲವು ಕಡೆಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಒಟ್ಟಿನಲ್ಲಿ ಸುಳ್ಯದಲ್ಲಿ ವಿದ್ಯುತ್ ಕಡಿತ ಪದೇ ಪದೇ ತಲೆ ನೋವು ಸೃಷ್ಠಿಸುತಿದೆ.
ಮೈನ್ ಲೈನ್‌ನಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ವಿದ್ಯುತ್ ಕಡಿತಗೊಂಡಿದೆ ಎಂದು ಮೆಸ್ಕಾಂ ತಿಳಿಸಿದೆ.







