ಉಕ್ರೇನ್ ಪ್ರಜೆಯ ಹತ್ಯೆ ಪ್ರಕರಣ: ರಶ್ಯದ ಯೋಧನಿಗೆ ಜೀವಾವಧಿ ಶಿಕ್ಷೆ
ಕೀವ್, ಮೇ 24: ಉಕ್ರೇನ್ ನ ಕೀವ್ ನ್ಯಾಯಾಲಯದಲ್ಲಿ ನಡೆದ ಯುದ್ಧಾಪರಾಧ ವಿಚಾರಣೆ ಸಂದರ್ಭ ಉಕ್ರೇನ್ ನ ಪ್ರಜೆಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದ ರಶ್ಯದ ಯೋಧ ವಾದಿಮ್ ಶಿಶಿಮರಿನ್ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಶಿಶಿಮರಿನ್ನನ್ನು ಬಳಿಕ ಉಕ್ರೇನ್ ಸೇನೆ ಬಂಧಿಸಿತ್ತು. ಯುದ್ಧಾಪರಾಧ ಮತ್ತು ಪೂರ್ವಯೋಜಿತ ಕೊಲೆಯ ಅಪರಾಧಕ್ಕೆ ಶಿಶಿಮರಿನ್ಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಾಗಿ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಧ್ಯೆ, ತನ್ನ ವಶದಲ್ಲಿರುವ ಉಕ್ರೇನ್ ಯೋಧರು ಹಾಗೂ ಉಕ್ರೇನ್ನ ಮರಿಯುಪೋಲ್ನಲ್ಲಿ ಶರಣಾಗಿರುವ ಯೋಧರನ್ನು ಯುದ್ಧಾಪರಾಧದ ವಿಚಾರಣೆಗೆ ಒಳಪಡಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಶ್ಯ ಪ್ರತಿಕ್ರಿಯಿಸಿದೆ. ಶಿಶಿಮರಿನ್ಗೆ ಶಿಕ್ಷೆ ಪ್ರಕಟವಾಗುವುದಕ್ಕೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ್ದ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್, ಯೋಧನನ್ನು ಸಮರ್ಥಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಈಗ ಇತರ ಮಾರ್ಗಗಳ ಮೂಲಕ ಈ ಕೆಲಸ ಮಾಡುವುದನ್ನು ಪರಿಶೀಲಿಸಲಾಗುತ್ತಿದೆ ಎಂದರು.
ಶಿಶಿಮರಿನ್ಗೆ ಶಿಕ್ಷೆ ವಿಧಿಸಿರುವುದು ರಶ್ಯದ ವಶದಲ್ಲಿರುವ ಉಕ್ರೇನ್ ಯೋಧರಿಗೆ ಅತ್ಯಂತ ಹಾನಿಕಾರಕವಾಗಿ ಪರಿಣಮಿಸಬಹುದು. ತನ್ನ ಯೋಧರ ಆತ್ಮಸ್ಥೈರ್ಯವನ್ನು ಉತ್ತೇಜಿಸಲು ರಶ್ಯವು ಉಕ್ರೇನ್ ಯೋಧರ ವಿಚಾರಣೆಗೂ ಚಾಲನೆ ನೀಡಿ ಶಿಕ್ಷೆ ವಿಧಿಸಬಹುದು ಎಂದು ಅಮೆರಿಕದ ನೋಟ್ರೆಡೇಮ್ ವಿವಿಯ ಅಂತರಾಷ್ಟ್ರೀಯ ಕಾನೂನು ತಜ್ಞೆ ಮೇರಿ ಎಲೆನ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿರುವ ಬೆಳವಣಿಗೆಯಲ್ಲಿ, ಮರಿಯುಪೋಲ್ನಲ್ಲಿ ಶರಣಾಗಿರುವ ಯೋಧರ ರಾಷ್ಟ್ರೀಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿ, ಅವರು ನಾಗರಿಕರ ವಿರುದ್ಧದ ಅಪರಾಧದಲ್ಲಿ ತೊಡಗಿದ್ದಾರೆಯೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ರಶ್ಯದ ಪ್ರಮುಖ ತನಿಖಾ ಸಂಸ್ಥೆ ಘೋಷಿಸಿದೆ.