ಗನ್ಮ್ಯಾನ್ ಒದಗಿಸಲು ಎಸ್ಪಿಗೆ ಮನವಿ ಮಾಡಿದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ

ವೇಣುಗೋಪಾಲ್-ನಗರಸಭೆ ಅಧ್ಯಕ್ಷ
ಚಿಕ್ಕಮಗಳೂರು, ಮೇ 24: ಇಲ್ಲಿನ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಗನ್ ಮ್ಯಾನ್ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ನಗರದಲ್ಲಿ ಸ್ವಚ್ಛತೆ ಕಾಪಾಡುವ ವಿಚಾರದಲ್ಲಿ ನಗರಸಭೆ ಅಧ್ಯಕ್ಷರು ಬಿಜೆಪಿ ಸದಸ್ಯರ ವಾರ್ಡ್ಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗೆ ಅವರು ಗುರಿಯಾಗಿದ್ದರು. ಈ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ನಗರಸಭೆ ಸದಸ್ಯ ಗೋಪಿ ಎಂಬವರಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಸಂಬಂಧ ನಗರ ಠಾಣೆಯಲ್ಲಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಪೌರಾಯುಕ್ತರ ಮೇಲೆ ದೂರು ಕೂಡ ದಾಖಲಾಗಿದೆ.
''ತಾನು ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಹಿಂದಿರುಗುತ್ತಿದ್ದ ವೇಳೆ ಅಪರಿಚಿತರು ತನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಮನವಿಯಲ್ಲಿ ಅಳಲು ತೋಡಿಕೊಂಡಿರುವ ಅವರು, ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಿರುವುದರಿಂದ ತನ್ನ ಭದ್ರತೆಗಾಗಿ ಗನ್ಮ್ಯಾನ್ ಒದಗಿಸಬೇಕು'' ಎಂದು ಅವರು ಮನವಿಯಲ್ಲಿ ಬರೆದುಕೊಂಡಿದ್ದಾರೆ.








