ವಾಣಿಜ್ಯ ಮೇಳ ‘ಐಆರ್ ಇಸಿ-2022'ಗೆ ಸಚಿವ ಎಂಟಿಬಿ ನಾಗರಾಜು ಚಾಲನೆ

ಬೆಂಗಳೂರು, ಮೇ 24: ಫ್ರಾಂಚೈಸ್ ಇಂಡಿಯಾ ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ಭಾರತದ ಬೃಹತ್ ವಾಣಿಜ್ಯ ಮೇಳ ‘ಚಿಲ್ಲರೆ ಮತ್ತು ಇ-ಕಾಮರ್ಸ್ ಉದ್ಯಮ-2022'(ಐಆರ್‍ಇಸಿ) ಮೇಳಕ್ಕೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜು, ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿಗಳ ಮೂಲಕ 577 ಕೋಟಿ ರೂ.ಬಂಡವಾಳ ಹೂಡಿಕೆಯ 1250 ಸಣ್ಣ ಕೈಗಾರಿಕೆಗಳ ಆರಂಭಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. ಇದರಿಂದ 57055 ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ಉದ್ಯೋಗ ಸೃಷ್ಟಿ ಮೂಲಕ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಸರಕಾರದ ಆದ್ಯತೆಯಾಗಿದೆ. ಅದಕ್ಕೆ ಅಗತ್ಯವಾದ ನೆರವು ನೀಡಲು ರಾಜ್ಯ ಸರಕಾರ ಬದ್ಧವಾಗಿದೆ. ಕಳೆದ ಸಾಲಿನಲ್ಲಿ ಸಣ್ಣ ಕೈಗಾರಿಕಾ ವಲಯದಲ್ಲಿ ವಿವಿಧ ಯೋಜನೆಗಳಿಗೆ 292 ಕೋಟಿ ರೂ.ಬಿಡುಗಡೆ ಮಾಡಿದ್ದು, ಇದರ ಪ್ರಯೋಜನವನ್ನು 3,209 ಮಂದಿ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಇ-ಕಾಮರ್ಸ್, ಡಿಜಿಟಲ್, ರೀಟೇಲ್‍ನಂತಹ ಅವಕಾಶವನ್ನು ಅಳವಡಿಸಿಕೊಂಡು ಅಧಿಕ ಗ್ರಾಹಕರನ್ನು ಅದರಲ್ಲೂ ಯುವ ಜನತೆಯನ್ನು ತಲುಪುವುದರಿಂದ ಉದ್ಯಮಗಳು ಯಶಸ್ಸು ಸಾಧಿಸಲು ಸಾಧ್ಯ ಎಂದು ನಾಗರಾಜು ನುಡಿದರು.
ದೇಶದ ವಿವಿಧೆಡೆಗಳಿಂದ ಆಗಮಿಸಿದ ಚಿಲ್ಲರೆ ಮತ್ತು ಇ-ಕಾಮರ್ಸ್ ಉದ್ಯಮದ 250ಕ್ಕೂ ಅಧಿಕ ಪ್ರಮುಖ ಉದ್ಯಮಿಗಳು ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.







