ಟೆಕ್ಸಸ್ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿ ಬಲಿ
ವಾಷಿಂಗ್ಟನ್, ಮೇ 25: ಅಮೆರಿಕದ ಟೆಕ್ಸಾಸ್ನಲ್ಲಿ ಪ್ರಾಥಮಿಕ ಶಾಲೆಗೆ ನುಗ್ಗಿದ 18 ವರ್ಷದ ಬಂದೂಕುಧಾರಿ ಯುವಕ ಮನಬಂದಂತೆ ಗುಂಡು ಹಾರಿಸಿ 19 ಮಕ್ಕಳ ಸಹಿತ 21 ಮಂದಿಯನ್ನು ಹತ್ಯೆಗೈದಿದ್ದಾನೆ. ಬಳಿಕ ಗುಂಡಿನ ದಾಳಿ ನಡೆಸಿದ ಯುವಕನನ್ನು ಭದ್ರತಾ ಪಡೆಯವರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಉವಾಲ್ಡೆ ನಗರದ ರಾಬ್ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಸಾಲ್ವದೋರ್ ರಾಮೋಸ್ ಎಂಬ ಯುವಕ ಮಧ್ಯಾಹ್ನದ ವೇಳೆ ಶಾಲೆಗೆ ನುಗ್ಗಿ ತನ್ನಲ್ಲಿದ್ದ ಹ್ಯಾಂಡ್ಗನ್ನಿಂದ ಗುಂಡು ಹಾರಿಸಿದ್ದಾನೆ. ಈತನ ಬಳಿ ರೈಫಲ್ ಕೂಡಾ ಇತ್ತು ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೋಟ್ ಹೇಳಿದ್ದಾರೆ.
ಗುಂಡಿನ ದಾಳಿಯಲ್ಲಿ 19 ಮಕ್ಕಳು, ಓರ್ವ ಶಿಕ್ಷಕ ಸಹಿತ 21 ಮಂದಿ ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ದುಷ್ಕರ್ಮಿಯನ್ನು ತಡೆಯಲು ಹೋದ ಪೊಲೀಸರತ್ತಲೂ ಆತ ಗುಂಡು ಹಾರಿಸಿದ್ದು ಇಬ್ಬರು ಪೊಲೀಸರಿಗೆ ಅಲ್ಪಪ್ರಮಾಣದ ಗಾಯವಾಗಿದೆ. ಬಳಿಕ ಭದ್ರತಾ ಯೋಧರ ಪ್ರತಿದಾಳಿಯಲ್ಲಿ ರಾಮೋಸ್ ಹತನಾಗಿದ್ದಾನೆ ಎಂದು ವರದಿಯಾಗಿದೆ. ಎರಡನೆ ತರಗತಿಯಿಂದ 4ನೇ ತರಗತಿಯವರೆಗಿನ ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದು ಇವರಲ್ಲಿ ಹೆಚ್ಚಿನವರು ಸ್ಪ್ಯಾನಿಷ್ ಭಾಷೆ ಮಾತನಾಡುವ, ಆರ್ಥಿಕವಾಗಿ ಹಿಂದುಳಿದ ವರ್ಗದವರು. ಗುಂಡಿನ ದಾಳಿಯ ವರದಿ ಪ್ರಕಟವಾಗುತ್ತಿದ್ದಂತೆಯೇ ತಮ್ಮ ಮಕ್ಕಳನ್ನು ಅಲ್ಲಿಂದ ಕರೆದುಕೊಂಡು ಹೋಗಲು ಪೋಷಕರು ಶಾಲೆಗೆ ಧಾವಿಸಿದರು. ಆದರೆ, ಗಾಯಗೊಂಡ ಅಥವಾ ಮೃತ ಮಕ್ಕಳ ಗುರುತು ಹಚ್ಚುವಿಕೆ ಪೂರ್ಣಗೊಳ್ಳುವವರೆಗೆ ಉಳಿದ ಮಕ್ಕಳು ಶಾಲೆಯಲ್ಲಿಯೇ ಇರಬೇಕಾಗುತ್ತದೆ ಎಂದು ಶಾಲೆಯ ಆಡಳಿತ ವರ್ಗ ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತ ಆರೋಪಿ ರಾಮೋಸ್ ಏಕಾಂಗಿಯಾಗಿ ಈ ಕೃತ್ಯ ನಡೆಸಿದ್ದಾನೆ . ಶಾಲೆಯಲ್ಲಿ ಗುಂಡಿನ ದಾಳಿ ನಡೆಸುವ ಮುನ್ನ ಆತ ತನ್ನ ಅಜ್ಜಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದ ಎಂದು ಮಾಹಿತಿ ಲಭಿಸಿದೆ. ಈ ಎರಡೂ ಗುಂಡಿನ ದಾಳಿಯ ನಡುವೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಗವರ್ನರ್ ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ಸಲ್ವದೋರ್ ರಾಮೋಸ್ ಸ್ಯಾನ್ ಆಂಟೋನಿಯೊ ನಗರದ ನಿವಾಸಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಫೆಲೊ ನಗರದ ಸೂಪರ್ಮಾರ್ಕೆಟ್ನಲ್ಲಿ ಗುಂಡಿನ ದಾಳಿ ನಡೆದ 10 ದಿನದೊಳಗೇ ಈ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಐದು ದಿನಗಳ ಏಶ್ಯಾ ಪ್ರವಾಸ ಮುಗಿಸಿ ಶ್ವೇತ ಭವನಕ್ಕೆ ಮರಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಪ್ರಕರಣದ ಬಗ್ಗೆ ತೀವ್ರ ಆತಂಕ ಮತ್ತು ಸಂತಾಪ ವ್ಯಕ್ಯಪಡಿಸಿದ್ದು ಮೃತರ ಗೌರವಾರ್ಥ ದೇಶದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಆದೇಶಿಸಿದ್ದಾರೆ. ಈ ರೀತಿಯ ಸಾಮೂಹಿಕ ಗುಂಡಿನ ದಾಳಿ ಪ್ರಕರಣ ವಿಶ್ವದ ಬೇರೆಲ್ಲಿಯೂ ಅಪರೂಪಕ್ಕೆ ನಡೆಯುತ್ತವೆ. ಆದರೆ ಅಮೆರಿಕದಲ್ಲಿ ಹೀಗೇಕೆ? ಗನ್ ಲಾಬಿಯ ವಿರುದ್ಧ ನಾವು ಯಾವತ್ತು ಒಗ್ಗೂಡಲಿದ್ದೇವೆ ಎಂದು ಬೈಡನ್ ಪ್ರಶ್ನಿಸಿದ್ದಾರೆ.
ಇದುವರೆಗೆ ಆದದ್ದು ಸಾಕು. ನಮ್ಮ ಹೃದಯ ಒಡೆಯುತ್ತಿದೆ. ನಾವು ಕಠಿಣ ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸಬೇಕಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.