ಮಳಲಿ ಪೇಟೆ ಮಸೀದಿ ಪ್ರಕರಣ: ಹಿಂದುತ್ವ ಸಂಘಟನೆಯಿಂದ 'ತಾಂಬೂಲ ಪ್ರಶ್ನೆ'

ಮಂಗಳೂರು, ಮೇ 25: ತೆಂಕ ಉಳಿಪಾಡಿಯ ಮಳಲಿ ಪೇಟೆಯ ಜುಮಾ ಮಸೀದಿಯ ನವೀಕರಣದ ವೇಳೆ ಹಿಂದುತ್ವ ಸಂಘಟನೆಗಳು ವಿವಾದ ಸೃಷ್ಟಿಸಿದ್ದರಿಂದ ನಿರ್ಮಾಣ ಕಾಮಗಾರಿಗೆ ನ್ಯಾಯಾಲಯ ತಡೆ ವಿಧಿಸಿರುವ ನಡುವೆಯೇ ಹಿಂದುತ್ವ ಸಂಘಟನೆಗಳಿಂದ ಬುಧವಾರ 'ತಾಂಬೂಲ ಪ್ರಶ್ನೆ' ಕಾರ್ಯಕ್ರಮ ನಡೆದಿದೆ.
ಇಂದು ಬೆಳಗ್ಗೆ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಕೇರಳ ಮೂಲದ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ 'ತಾಂಬೂಲ ಪ್ರಶ್ನೆ' ಕಾರ್ಯಕ್ರಮ ನಡೆದಿದೆ. ಈ ವೇಳೆ ಗೋಪಾಲಕೃಷ್ಣ ಪಣಿಕ್ಕರ್, "ಮಳಲಿ ಪೇಟೆ ಜುಮಾ ಮಸೀದಿಯಿದ್ದಲ್ಲಿ ಈ ಹಿಂದೆ 'ದೈವ ಸಾನಿಧ್ಯ' ಇತ್ತೆಂಬುದು 'ತಾಂಬೂಲ ಪ್ರಶ್ನೆ'ಯಲ್ಲಿ ತಿಳಿದುಬಂದಿದೆ. ಈ ಹಿಂದೆ ಇಲ್ಲಿ ದೈವೀ ಶಕ್ತಿ ಇತ್ತು, ಪೂರ್ಣವಾದ ಚೈತನ್ಯ ಇತ್ತು. ನಾಶವಾದ 'ದೈವ ಸಾನಿಧ್ಯ'ವನ್ನು ಪುನರ್ ಸ್ಥಾಪಿಸಬೇಕು. ಇಲ್ಲವಾದಲ್ಲಿ ಊರಿಗೆ ಕೆಡುಕುಂಟಾಗಲಿದೆ" ಎಂದು ಅವರು ಹೇಳಿದ್ದಾರೆ.
ಮಳಲಿ ಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡದ ನವೀಕರಣ ನಡೆಯುತ್ತಿದ್ದ ಅಲ್ಲಿ ದೇವಸ್ಥಾನದ ಕುರುಹು ಪತ್ತೆಯಾಗಿದೆ ಎಂದು ಆರೋಪಿಸಿ ಎಪ್ರಿಲ್ 21ರಂದು ಸಂಘ ಪರಿವಾರದ ಕಾರ್ಯಕರ್ತರು ನವೀಕರಣಕ್ಕೆ ಅಡ್ಡಿಪಡಿಸಿದ್ದರು. ಅಲ್ಲದೆ, ಬಜರಂಗದಳ-ವಿಎಚ್‌ಪಿ ಮುಖಂಡರು ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮನವಿಯನ್ನು ಸ್ವೀಕರಿಸಿದ ಮಂಗಳೂರು ಮೂರನೇ ಅಡಿಷನಲ್ ಸಿವಿಲ್ ಜಡ್ಜ್ ಆ್ಯಂಡ್ ಜೆಎಂಎಫ್‌ಸಿ ನ್ಯಾಯಾಲಯವು ಮಳಲಿ ಮಸೀದಿಯ ಹಳೆಯ ಕಟ್ಟಡವನ್ನು ಕೆಡವದಂತೆ ಎ.22ರಂದು ತಾತ್ಕಾಲಿಕ ಆದೇಶ ನೀಡಿದೆ. ನ್ಯಾಯಾಲಯದ ನಿರ್ಬಂಧಕಾಜ್ಞೆಯ ನಡುವೆಯೇ ಹಿಂದುತ್ವ ಸಂಘಟನೆಗಳು ಇಂದು ಕೇರಳದಿಂದ ಜ್ಯೋತಿಷಿಯನ್ನು ಕರೆಸಿ 'ತಾಂಬೂಲ ಪ್ರಶ್ನೆ' ಕಾರ್ಯಕ್ರಮ ನಡೆಸಿದೆ.
ಮಸೀದಿ ಸುತ್ತಮುತ್ತ ನಿಷೇಧಾಜ್ಞೆ
ಈ ನಡುವೆ 'ತಾಂಬೂಲ ಪ್ರಶ್ನೆ'ಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ) ವರೆಗೆ ಮೇ 24ರ ರಾತ್ರಿ 8ರಿಂದ ಅನ್ವಯವಾಗುವಂತೆ ಮೇ 26ರ ಬೆಳಗ್ಗೆ 8ರವರೆಗೆ ಸೆ.144ರ ಅನ್ವಯ ಸೆಕ್ಷನ್ ಜಾರಿಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.