ಗೊಂದಲ ಬೇಡ, ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಮರಳು ಲಭ್ಯ: ಜಿಲ್ಲಾಧಿಕಾರಿ ಡಾ.ರಾಜೇಂದ್ರ

ಮಂಗಳೂರು, ಮೇ 25: ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರ ಹೆಚ್ಚಿದೆ ಎಂಬ ಮಾತು ಸರಿಯಲ್ಲ. ದ.ಕ. ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಮರಳು ಸಂಗ್ರಹವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಕಿಂದು ಮಾತನಾಡಿದ ಅವರು, ಶಂಭೂರು ಹಾಗೂ ಮರವೂರಿನ ಡ್ಯಾಂನಲ್ಲಿ ಹೂಳೆತ್ತುವಿಕೆಯ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ. ಸಿಹಿನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ಮರಳು ಮಿತ್ರ ಆ್ಯಪ್ ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗೆ 10 ಮೆಟ್ರಿಕ್ ಟನ್ ಮರಳು ಪಡೆಯಬಹುದು. ಜಿಎಸ್ ಟಿ ಮತ್ತು ಸಾಗಾಟ ವೆಚ್ಚದೊಂದಿಗೆ ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳನ್ನು ಖರೀದಿಸಬಹುದು ಎಂದು ತಿಳಿಸಿದರು.
ಅದ್ಯಪಾಡಿ ಮತ್ತು ಶಂಭೂರು ಮರಳು ಸ್ಟಾಕ್ ಯಾರ್ಡ್ ನಲ್ಲಿ ಕ್ರಮವಾಗಿ 9,000 ಮತ್ತು 12,000 ಮೆಟ್ರಿಕ್ ಟನ್ ಲಭ್ಯವಿದೆ. ಸಂಗ್ರಹಿಸಿಡಲು ಜಾಗದ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಮರಳು ಜಿಲ್ಲೆಯ ನಿರ್ಮಾಣ ಕಾಮಗಾರಿಗೆ ಲಭ್ಯವಾಗಲಿದೆ. ಹೊರ ಜಿಲ್ಲೆಯಿಂದಲೂ ಮರಳಿಗೆ ಬೇಡಿಕೆ ಇದ್ದರೂ ಅನುಮತಿ ನೀಡಲಾಗಿಲ್ಲ. ಸದ್ಯ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಗೆ ಕ್ರಮ ವಹಿಸಲಾಗುವುದು. ಹಾಗಾಗಿ ಯಾರೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.