ಕರ್ನೂಲ್ನಲ್ಲಿ ಕೆಜಿಗೆ 130 ರೂ. ತಲುಪಿದ ಟೊಮೆಟೊ ಬೆಲೆ
Photo: PTI
ನೆಲ್ಲೂರು/ತಿರುಪತಿ: ಯಮ್ಮಿಗನೂರು, ಆದೋನಿ ಹಾಗೂ ಕರ್ನೂಲು ನಗರದ ಚಿಲ್ಲರೆ ಅಂಗಡಿಗಳಲ್ಲಿ ಮಂಗಳವಾರ ಟೊಮೆಟೊ ಹಣ್ಣನ್ನು ಕೆಜಿಗೆ 130 ರೂ.ಗೆ ಮಾರಾಟ ಮಾಡಿದ್ದರಿಂದ ಟೊಮೆಟೊ ಬೆಲೆ ಗಗನಮುಖಿಯಾಗಿದೆ.
ಟೊಮೆಟೊ ಕೊರತೆಯಿಂದಾಗಿ ರಾಯಲಸೀಮಾ ಜಿಲ್ಲೆಗಳಲ್ಲಿನ ಗ್ರಾಹಕರು ಮಡ್ನಪಲ್ಲಿ, ಅನ್ನಮಯ್ಯ ಜಿಲ್ಲೆ ಹಾಗೂ ಕರ್ನಾಟಕದ ಚಿಂತಾಮಣಿಯ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟೊಮೆಟೊ ವ್ಯಾಪಾರ ನಡೆಯುವ ರಾಜ್ಯದ ಅತಿದೊಡ್ಡ ಯಾರ್ಡ್ಗಳಲ್ಲಿ ಒಂದಾದ ಪತ್ತಿಕೊಂಡದ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊವನ್ನು ಕೆಜಿಗೆ 80 ರಿಂದ 90 ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತಿತ್ತು. ಕರ್ನೂಲ್ನಲ್ಲಿ ಆಗಸ್ಟ್ನಿಂದ ಫೆಬ್ರುವರಿ ನಡುವೆ ಟೊಮೆಟೊ ಕೊಯ್ಲು ಮಾಡಲಾಗುತ್ತದೆ. ಸೀಸನ್ ಆರಂಭವಾದಾಗ ಪತ್ತಿಕೊಂಡ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ನಲ್ಲಿ ಕೆಜಿಗೆ 4 ರೂ.ಗೆ ಮಾರಾಟವಾಗುತ್ತಿದ್ದ ತರಕಾರಿ ಈಗ ರೈತ ಬಝಾರ್ನಲ್ಲಿ 80 ರೂ.ಗೆ ಏರಿದೆ ಹಾಗೂ ಚಿಲ್ಲರೆ ತರಕಾರಿ ಮಾರುಕಟ್ಟೆಯಲ್ಲಿ 130 ರೂ.ಗೆ ತಲುಪಿದೆ. ಜುಲೈ ಅಂತ್ಯದವರೆಗೆ ಬೆಲೆ ಏರಿಕೆ ಮುಂದುವರಿಯಬಹುದು ಹಾಗೂ ಪ್ರತಿ ಕೆಜಿಗೆ ರೂ 150 ತಲುಪಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಸನ್ನಿವೇಶವನ್ನು ವಿವರಿಸಿದ ಅಧಿಕಾರಿಗಳು ಜಿಲ್ಲೆಯಲ್ಲಿ ಸುಮಾರು 15,000 ಹೆಕ್ಟೇರ್ಗಳಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಆದರೆ, ಮಳೆ ಕೊರತೆಯಿಂದ ಇಳುವರಿ ಶೇ.60 ರಷ್ಟು ಕುಸಿದಿದೆ ಎಂದರು.