ಗ್ಯಾನವಾಪಿ ಮಸೀದಿ ಕಟ್ಟಡದಲ್ಲಿ ಮುಸ್ಲಿಮರಿಗೆ ನಿಷೇಧ ಹೇರುವಂತೆ ಅರ್ಜಿ ಸಲ್ಲಿಸಿದ ಹಿಂದುತ್ವ ಸಂಘಟನೆ

ವಾರಣಾಸಿ: ಇಲ್ಲಿನ ಸಿವಿಲ್ ನ್ಯಾಯಾಧೀಶರ ಮುಂದೆ ಹಿಂದುತ್ವ ಸಂಘಟನೆಯೊಂದು ಅರ್ಜಿ ಸಲ್ಲಿಸಿದ್ದು, "ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಮುಸ್ಲಿಮರು ಪ್ರವೇಶಿಸುವುದನ್ನು ನಿಷೇಧಿಸಬೇಕು" ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ndtv.com ಬುಧವಾರ ವರದಿ ಮಾಡಿದೆ.
ವೀಡಿಯೊ ಸಮೀಕ್ಷೆಯ ಸಮಯದಲ್ಲಿ ಸ್ಥಳದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಶಿವಲಿಂಗವನ್ನು ಪೂಜಿಸಲು ಹಿಂದೂಗಳಿಗೆ ಅವಕಾಶ ನೀಡಬೇಕು ಎಂದು ಸಂಘಟನೆಯು ಒತ್ತಾಯಿಸಿದೆ.
ವಿಶ್ವ ವೈದಿಕ ಸನಾತನ ಸಂಘದ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಿರಣ್ ಸಿಂಗ್ ಎಂಬಾತ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ರವಿಕುಮಾರ್ ದಿವಾಕರ್ ರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ನ್ಯಾಯಾಧೀಶರು ಬುಧವಾರ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.
ಮೇ 20 ರಂದು, ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯ ಹಿಂಭಾಗದಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಕೋರಿ ಹಿಂದೂ ವಾದಿಗಳು ಸಲ್ಲಿಸಿದ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ವಿಷಯದ ಸಂಕೀರ್ಣತೆಯನ್ನು ಉಲ್ಲೇಖಿಸಿ ದಿವಾಕರ್ ಉಪಸ್ಥಿತರಿರುವ ನ್ಯಾಯಾಲಯದಿಂದ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಈ ಸ್ಥಳದಲ್ಲಿ ಹಿಂದೂ ದೇವತೆ ಶೃಂಗಾರ್ ಗೌರಿಯ ಚಿತ್ರವಿದೆ ಎಂದು ದೂರುದಾರರು ಆರೋಪಿಸಿದ್ದಾರೆ.





