ಮಂಗಳೂರು; ಬಸ್ಸುಗಳಲ್ಲಿ ಜೇಬುಗಳ್ಳರಿದ್ದಾರೆ ಎಚ್ಚರಿಕೆ
ಪ್ರಯಾಣದ ವೇಳೆ ಹಣ, ವಸ್ತುಗಳ ಬಗ್ಗೆ ಇರಲಿ ಗಮನ

ಮಂಗಳೂರು : ಬಸ್ಸುಗಳಲ್ಲಿ ಮತ್ತೆ ಜೇಬುಗಳ್ಳರ ಹಾವಳಿ ಆರಂಭವಾಗಿದ್ದು, ನಿನ್ನೆ ಮಧ್ಯಾಹ್ನ ತೊಕ್ಕೊಟ್ಟಿನಿಂದ ಹರೇಕಳ ಪಾವೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ದುಡಿಮೆಯ 7 ಸಾವಿರ ರೂ. ಕಳೆದುಕೊಂಡಿದ್ದಾರೆ.
ಮೂಲತ: ಆಕಾಶಭವನ ನಿವಾಸಿ, ನಗರದ ಬಿಜೈ ಬಳಿ ಹೆಂಚಿನ ಮನೆ ನಿರ್ಮಾಣದ ವೇಳೆ ಉಪಯೋಗಿಸುವ ತೆಂಗಿನ ಮರದ ತೊಲೆ (ಅಡ್ಡ)ಗಳ ವ್ಯಾಪಾರ ಮಾಡುವ ವ್ಯಕ್ತಿಯೊಬ್ಬರು ನಿನ್ನೆ ಮಧ್ಯಾಹ್ನ ತಮ್ಮ ಸಂಬಂಧಿಕರ ಮನೆಗೆ ಹೋಗಲು ತೊಕ್ಕೊಟ್ಟಿಗೆ ತೆರಳಿದ್ದಾರೆ. ಅಲ್ಲಿಂದ ಹರೇಕಳ ಪಾವೂರು ಹೋಗುವ ರೂಟ್ ನಂ. 55 ಬಸ್ಸು ಹತ್ತಿದ್ದಾರೆ. ಬಸ್ಸಿನಲ್ಲಿ ತುಂಬಾ ಪ್ರಯಾಣಿಕರಿದ್ದ ಕಾರಣ ನಿಂತೇ ಪ್ರಯಾಣಿಸಬೇಕಾಯಿತು. ಅವರ ಎಡಗೈಯ್ಯಲ್ಲೊಂದು ಬಟ್ಟೆಯ ಬ್ಯಾಗಿದ್ದು, ಬಲಗೈಯಲ್ಲಿ ಬಸ್ಸಿನ ರಾಡ್ ಹಿಡಿದು ಪ್ರಯಾಣಿಸಿದ್ದರು. ಪಂಚೆಯನ್ನೇ ಧರಿಸುವ ಅವರು ಒಳಗೊಂದು ಬರ್ಮುಡಾ ಧರಿಸಿ ಅದರಲ್ಲಿ ತಮ್ಮ ವ್ಯಾಪಾರದ ಹಣವನ್ನು ಇಟ್ಟುಕೊಳ್ಳುವ ರೂಢಿ ಹೊಂದಿದವರು.
ನಿನ್ನೆಯೂ ತಮ್ಮ ಸಂಬಂಧಿಕರ ಮನೆ ತಲುಪಿದ ಬಳಿಕ ಪಂಚೆ ಬದಲಾಯಿಸುವ ಸಂದರ್ಭ ಬರ್ಮುಡಾ ಜೇಬು ಹರಿದಿರುವುದು ಗಮನಕ್ಕೆ ಬಂದಿದೆ. ಅತ್ಯಂತ ನಾಜೂಕಾಗಿ ಅವರ ಬರ್ಮುಡಾ ಜೇಬು ಹರಿದು ಅದರಲ್ಲಿದ್ದ 7 ಸಾವಿರ ರೂ. ನಗದನ್ನು ಜೇಬುಗಳ್ಳರು ಲಪಟಾಯಿಸಿದ್ದಾರೆ.
ಏನೂ ಮಾಡಲಾಗದ ಅಸಹಾಯಕತೆ. ಅಪರೂಪಕ್ಕೆ ಸಂಬಂಧಿಕರ ಮನೆಗೆ ತೆರಳುವ ಅವರು ತಮ್ಮ ವ್ಯಾಪಾರದಲ್ಲಿ ದೊರಕಿದ್ದ ಆ ಹಣವನ್ನು ಪತ್ನಿಯ ಚಿಕಿತ್ಸೆಗಾಗಿ ಉಪಯೋಗಿಸಲು ನಿರ್ಧರಿಸಿದ್ದರು. ಆದರೆ ಅವರಿಗೆ ಅರಿವಿಲ್ಲದಂತೆಯೇ ಬಸ್ಸಿನಲ್ಲಿ ಜೇಬುಕಳ್ಳರು ಅವರ ದುಡಿಮೆಯ ಹಣವನ್ನೇ ಎಗರಿಸಿದ್ದರು.
ಬಸ್ಸಿನಲ್ಲಿ ತಾವು ನಿಂತಿದ್ದ ಬಳಿ ಸಾಕಷ್ಟು ಪ್ರಯಾಣಿಕರಿದ್ದು, ಮನೆ ತಲುಪಿ ಬಟ್ಟೆ ಬದಲಾಯಿಸುವಾಗಲೇ ಹಣ ಕಳೆದಿರುವ ವಿಚಾರ ಅವರ ಗಮನಕ್ಕೆ ಬಂದಿದ್ದು. ಹೀಗಾಗಿ ಯಾರಲ್ಲೂ ಕೇಳುವಂತಿಲ್ಲ, ಎಲ್ಲೂ ದೂರುವಂತಿಲ್ಲ ಎಂಬುದು ಅವರ ಅಸಮಾಧಾನದ ಮಾತು.
ಹಾಗಾಗಿ ಸಾರ್ವಜನಿಕರೇ ಬಸ್ಸುಗಳಲ್ಲಿ ಪ್ರಯಾಣಿಸುವಾಗ ನಿಮ್ಮ ಹಣ ಹಾಗೂ ವಸ್ತುಗಳ ಮೇಲೆ ಗಮನವಿರಲಿ. ಸ್ವಲ್ಪ ಎಚ್ಚರ ತಪ್ಪಿದರೂ ಜೇಬುಗಳ್ಳರು ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾರೆ.
ಹಣ ಎಗರಿಸಲು ಹೀಗೂ ಮಾಡುತ್ತಾರೆ !
ನಗರದ ವೆಲೆನ್ಸಿಯಾ ಸಮೀಪ ಎಟಿಎಂ ಹೊರಭಾಗದಲ್ಲಿ ನಿಂತ ಮಹಿಳೆಯೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಿ ಹೊರಗೆ ಬಂದ ವ್ಯಕ್ತಿಯ ಬಳಿ ‘ನನಗೆ ಅರ್ಜಂಟ್ 4 ಸಾವಿರ ರೂ. ಕ್ಯಾಷ್ ಬೇಕಿದೆ. ನನ್ನ ಎಟಿಎಂ ಕಾರ್ಡ್ ಸರಿಯಿಲ್ಲ. ನಿಮ್ಮ ನಂಬರ್ ಕೊಡಿ, ನನ್ನ ಗಂಡನ ಮೊಬೈಲ್‌ನಿಂದ ನಿಮಗೆ ಗೂಗಲ್ ಪೇ ಮಾಡುತ್ತಾರೆ’ ಎಂದು ಹೇಳಿ ಅವಸರಸವಾಗಿ ಮಾತನಾಡುತ್ತಾಳೆ.
ಆ ಮಹಿಳೆಯ ದಯನೀಯ ಸ್ಥಿತಿಗೆ ಮರುಕಪಟ್ಟ ವ್ಯಕ್ತಿ 4 ಸಾವಿರ ರೂ. ಕ್ಯಾಷ್ ಕೊಟ್ಟು, ಮೊಬೈಲ್ ನಂಬರ್ ಪಡೆಯುತ್ತಾರೆ. ಕೂಡಲೇ ಮಹಿಳೆ ರಿಕ್ಷಾ ಹಿಡಿದು ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ಸ್ವಲ್ಪ ಸಮಯದ ಬಳಿಕ ಮಹಿಳೆ ಕೊಟ್ಟ ಮೊಬೈಲ್‌ಗೆ ಕರೆ ಮಾಡಿದ್ರೆ ನಾಟ್ ರೀಚೆಬಲ್...
ಬುರ್ಕಾ ಧರಿಸಿದ ಈ ಮಹಿಳೆ ಇದೇ ರೀತಿ ಈ ಹಿಂದೆಯೂ ಎರಡರಿಂದ ಮೂರು ಬಾರಿ ನಗರದ ಎಟಿಎಂ ಬಳಿ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ.







