ಎಂಆರ್‌ಪಿಎಲ್ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಸಿಗದ ಆದ್ಯತೆ; ಜನಪ್ರತಿನಿಧಿಗಳ ವಿರುದ್ಧ ಡಿವೈಎಫ್‌ಐ ಆಕ್ರೋಶ

ಮಂಗಳೂರು : ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಕಡೆಗಣಿಸಿರುವ ಎಂಆರ್‌ಪಿಎಲ್ ಕಂಪೆನಿಯು 56 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ಯುವಜನರಿಗೆ ಆದ್ಯತೆ ನೀಡದೆ ವಂಚಿಸಿದೆ. ಅಲ್ಲದೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಇತರ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ಷದ ಹಿಂದೆ 233 ಉದ್ಯೋಗಗಳ ನೇಮಕಾತಿ ಸಂದರ್ಭ ಸ್ಥಳೀಯರನ್ನು ಪೂರ್ತಿ ಹೊರಗಿಟ್ಟಿದ್ದ ಎಂಆರ್‌ಪಿಎಲ್ ಕಂಪೆನಿಯು ತನ್ನ ಕನ್ನಡಿಗ ವಿರೋಧಿ ಹಳೆಯ ಚಾಳಿಯನ್ನು ಮತ್ತೆ ಮುಂದುವರಿಸಿದೆ. ಈ ಬಾರಿ 56 ಹುದ್ದೆಗಳ ನೇಮಕಾತಿಯಲ್ಲೂ ಅನ್ಯಾಯ ಎಸಗಿದೆ. ಕಂಪೆನಿಯ ಈ ವಂಚನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಅವಿಭಜಿತ ದ.ಕ.ಜಿಲ್ಲೆಯ ಜನಪ್ರತಿನಿಧಿಗಳೇ ನೇರ ಹೊಣೆ. ತಕ್ಷಣ ಈ ನೇಮಕಾತಿ ಪ್ರಕ್ರಿಯೆಗೆ ತಡೆ ಹೇರಿ ಸ್ಥಳೀಯರಿಗೆ ಆದ್ಯತೆ ಒದಗಿಸಬೇಕು. ಇಲ್ಲವೇ ತಮ್ಮ ವೈಫಲ್ಯದ ಹೊಣೆ ಹೊತ್ತು ಸಂಸದ, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎಂಆರ್‌ಪಿಎಲ್ ಉದ್ಯೋಗ ನೇಮಕಾತಿಯಲ್ಲಿ ವ್ಯವಸ್ಥಿತವಾಗಿ ಸ್ಥಳೀಯರನ್ನು ಹೊರಗಿಡುತ್ತಲೆ ಬಂದಿದೆ. ಅದರಲ್ಲೂ ಮ್ಯಾನೇಜ್ಮೆಂಟ್ ವಿಭಾಗದ ನೇಮಕಾತಿಗಳು ಸ್ಥಳೀಯರಿಗೆ ಸದಾ ಬಾಗಿಲು ಮುಚ್ಚಿರುತ್ತವೆ. ವರ್ಷದ ಹಿಂದೆ 233 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಾಗ ದ.ಕ. ಜಿಲ್ಲೆಗೆ ಕೇವಲ 2 ಸಹಿತ ರಾಜ್ಯಕ್ಕೆ 13 ಹುದ್ದೆಗಳು ಮಾತ್ರ ದೊರಕಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸು ಗಳನ್ನು ಅಳವಡಿಸಿಕೊಳ್ಳುವಂತೆ ನೊಟೀಸು ನೀಡಿದ್ದರೂ ಕಂಪೆನಿ ನಿರಾಕರಿಸಿತ್ತು. ದೇಶದ ವಿವಿಧೆಡೆಯ ಒಎನ್‌ಜಿಸಿ ಘಟಕಗಳು ಸ್ಥಳೀಯರಿಗೆ ಆದ್ಯತೆ ಒದಗಿಸಿದ್ದರೂ ಮಂಗಳೂರು ಘಟಕ ಮಾತ್ರ ಸ್ಥಳೀಯರನ್ನು ಉದ್ದೇಶ ಪೂರ್ವಕವಾಗಿ ಹೊರಗಿಡುತ್ತಿದೆ ಎಂದು ಆಪಾದಿಸಿದ್ದಾರೆ.
233 ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಅನ್ಯಾಯವಾದಾಗ ತುಳುನಾಡಿನಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಲಾಕ್‌ಡೌನ್ ನಿರ್ಬಂಧದ ಹೊರತಾಗಿಯೂ ಮನೆ ಮನೆ ಪ್ರತಿಭಟನೆ ನಡೆಸಿ ನಾಡಿನ ನಿರುದ್ಯೋಗಿ ಯುವಜನರ ಪರವಾಗಿ ಧ್ವನಿ ಎತ್ತಿದ್ದರು. ಆ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್ ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಮಾತುಕತೆಯ ನಾಟಕ ನಡೆಸಿದ್ದರು. 233 ಉದ್ಯೋಗದ ನೇಮಕಾತಿ ಪೂರ್ತಿ ರದ್ದುಗೊಳ್ಳುತ್ತದೆ, ಸ್ಥಳೀಯರಿಗೆ ಆದ್ಯತೆಯೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಿಸಿದ್ದರು. ಆದರೆ ಕಂಪೆನಿಯು ಮೊದಲಿನಂತೆ ಆಯ್ಕೆಗೊಂಡಿದ್ದ ಹೊರರಾಜ್ಯದ 233 ಉದ್ಯೋಗಿಗಳನ್ನೇ ಮುಂದುವರಿಸಿತ್ತು. ಜನಾಕ್ರೋಶ ತಪ್ಪಿಸಲು ಸುಳ್ಳು ಹೇಳಿಕೆ ನೀಡಿದ್ದ ಜನಪ್ರತಿನಿಧಿಗಳು ಆ ನಂತರವೂ ಸ್ಥಳೀಯರಿಗೆ ಆದ್ಯತೆ ಒದಗಿಸಲು ಸರಕಾರಗಳ ಮಟ್ಟದಲ್ಲೇ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಮುನೀರ್ ಕಾಟಿಪಳ್ಳ ಆಪಾದಿಸಿದ್ದಾರೆ.
ಈಗ ಮತ್ತೆ ಸಹಾಯಕ ಇಂಜಿನಿಯರ್, ಮ್ಯಾನೇಜ್ಮೆಂಟ್ ಹುದ್ದೆಗಳ ಸಹಿತ 56 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಸ್ಥಳೀಯರನ್ನು ಹೊರಗಿಟ್ಟು ಕಂಪೆನಿ ಆರಂಭಿಸಿದೆ. ನೇಮಕಾತಿ ಪ್ರಕ್ರಿಯೆ ಈಗ ಆರಂಭದ ಘಟ್ಟದಲ್ಲಿದ್ದು ತಡೆಯಲು ಎಲ್ಲಾ ಅವಕಾಶಗಳು ಇವೆ. ಜಿಲ್ಲೆಯ ಸಂಸದ, ಶಾಸಕರುಗಳು ತಕ್ಷಣ ನೇಮಕಾತಿ ಪ್ರಕ್ರಿಯೆಗೆ ಸರಕಾರಗಳ ಮಟ್ಟದಲ್ಲೇ ತಡೆ ಹೇರಬೇಕು. ಸ್ಥಳೀಯರಿಗೆ ಶೇ.80 ಸ್ಥಾನಗಳನ್ನು ಮೀಸಲಿಟ್ಟು ನೇಮಕಾತಿ ನಡೆಯುವಂತೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ವಿಧಾನ ಪರಿಷತ್ ಭರವಸೆ ಸಮಿತಿಯು ಜಿಲ್ಲಾ ಪ್ರವಾಸದ ಸಂದರ್ಭ ಕಂಪೆನಿಯಿಂದ ಉಂಟಾಗುವ ಗಂಭೀರ ಪರಿಸರ ಮಾಲಿನ್ಯ ಹಾಗೂ ಸ್ಥಳೀಯರಿಗೆ ಉದ್ಯೋಗ ವಂಚನೆಯ ಆಘಾತಕಾರಿ ಅಂಶಗಳು ಹೊರಬಿದ್ದಿವೆ. ತುಳುನಾಡಿನ ನೆಲ, ಜಲವನ್ನು ವಿಷಮಯಗೊಳಿಸುವ ಕಂಪೆನಿ, ನಿರುದ್ಯೋಗದ ಗಂಭೀರ ಸಮಸ್ಯೆಯಲ್ಲಿ ಬಳಲುತ್ತಿರುವ ತುಳುನಾಡಿನ ನಿರುದ್ಯೋಗಿ ಯುವಜನರನ್ನು ಉದ್ಯೋಗದ ಅವಕಾಶಗಳಿಂದ ಹೊರಗಿಡುವುದು ಯಾವ ಕಾರಣಕ್ಕೂ ಒಪ್ಪತಕ್ಕದಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಾಗದಿದ್ದಲ್ಲಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.







