ವಂದೇ ಮಾತರಂ ಗೀತೆಗೆ ʼಜನಗಣಮನʼ ದ ಸಮಾನ ಸ್ಥಾನಮಾನ ನೀಡಬಹುದೇ? ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ,ಮೇ 25: ಸ್ವಾತಂತ್ರ ಹೋರಾಟದಲ್ಲಿ ಐತಿಹಾಸಿಕ ಪಾತ್ರವನ್ನು ಹೊಂದಿದ್ದ ‘ವಂದೇ ಮಾತರಂ’ ಗೀತೆಗೆ ‘ಜನ-ಮನ-ಗಣ’ದಷ್ಟೇ ಗೌರವ ನೀಡಬೇಕು ಮತ್ತು ಸಮಾನ ಸ್ಥಾನಮಾನವನ್ನು ಹೊಂದಿರಬೇಕು ಎಂದು ಘೋಷಿಸುವಂತೆ ನಿರ್ದೇಶವನ್ನು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.
ಗೃಹ,ಶಿಕ್ಷಣ,ಸಂಸ್ಕೃತಿ ಹಾಗೂ ಕಾನೂನು ಮತ್ತು ನ್ಯಾಯ ಸಚಿವಾಲಯಗಳು ಹಾಗೂ ಇತರರಿಗೆ ನೋಟಿಸನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ವಿಪಿನ ಸಾಂಘಿ ಮತ್ತು ಸಚಿನ್ ದತ್ತಾ ಅವರ ಪೀಠವು,ವಿಷಯವು ನ್ಯಾಯಾಲಯದಲ್ಲಿ ವಿಚಾರಣೆಗೆ ನಿಗದಿಯಾಗುವ ಮುನ್ನವೇ ಅರ್ಜಿದಾರರು ಅದರ ಪ್ರಚಾರಕ್ಕಾಗಿ ಮಾಧ್ಯಮಗಳ ಬಳಿ ತೆರಳಿದ್ದಕ್ಕಾಗಿ ಅಸಮಾಧಾನವನ್ನು ವ್ಯಕ್ತಪಡಿಸಿತು.
ನ್ಯಾಯಾಲಯವು ವಿಚಾರಣೆಯನ್ನು 2022,ನ.9ಕ್ಕೆ ನಿಗದಿಗೊಳಿಸಿದೆ.
ಪ್ರತಿ ಕೆಲಸದ ದಿನದಂದು ಜನ-ಗಣ-ಮನ ಮತ್ತು ವಂದೇಮಾತರಂ ಅನ್ನು ಎಲ್ಲ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನುಡಿಸಲಾಗುತ್ತದೆ ಮತ್ತು ಹಾಡಲಾಗುತ್ತದೆ ಎನ್ನುವುದನ್ನು ಖಚಿತಪಡಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶ ಕೋರಿರುವ ಅರ್ಜಿಯು,ಮದ್ರಾಸ್ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳೊಂದಿಗೆ ಓದಲಾದ 1950,ಜ.24ರ ಸಂವಿಧಾನ ಸಭೆಯ ಆಶಯಗಳಿಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ರಚಿಸುವಂತೆಯೂ ಕೋರಿದೆ.
ಭಾರತವು ರಾಜ್ಯಗಳ ಒಕ್ಕೂಟವಾಗಿದೆ,ರಾಜ್ಯಗಳ ಸಂಘವಲ್ಲ ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ ಉಪಾಧ್ಯಾಯ ಅವರು,ಒಂದೇ ಒಂದು ರಾಷ್ಟ್ರೀಯತೆಯಿದ್ದು ಅದು ಭಾರತೀಯತೆಯಾಗಿದೆ. ವಂದೇ ಮಾತರಂ ಅನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದೇಶದ ಒಗ್ಗಟ್ಟನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜನ-ಗಣ-ಮನ ಮತ್ತು ವಂದೇ ಮಾತರಂ ಗೀತೆಗಳಿಗೆ ಉತ್ತೇಜನ ಮತ್ತು ಪ್ರಚಾರಕ್ಕಾಗಿ ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವುದು ಸರಕಾರದ ಕರ್ತವ್ಯವಾಗಿದೆ. ಇವೆರಡೂ ಗೀತೆಗಳನ್ನು ಸಂವಿಧಾನ ನಿರ್ಮಾತೃರೇ ನಿರ್ಧರಿಸಿರುವುದರಿಂದ ಅದು ಇತರ ಯಾವುದೇ ಭಾವನೆಯನ್ನು ಪ್ರಚೋದಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.
ಜನ-ಗಣ-ಮನದಲ್ಲಿ ದೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾವನೆಗಳನ್ನು ವ್ಯಕ್ತಪಡಿಸಲಾಗಿದೆ. ಆದರೆ ವಂದೇ ಮಾತರಂ ಗೀತೆಯಲ್ಲಿ ವ್ಯಕ್ತಪಡಿಸಲಾಗಿರುವ ಭಾವನೆಗಳು ದೇಶದ ಗುಣಲಕ್ಷಣ ಮತ್ತು ಶೈಲಿಯನ್ನು ಸೂಚಿಸುತ್ತವೆ ಮತ್ತು ರಾಷ್ಟ್ರಗೀತೆಯಷ್ಟೇ ಗೌರವಕ್ಕೆ ಅರ್ಹವಾಗಿದೆ.
ಕೆಲವೊಮ್ಮೆ ಅನುಮತಿಸಲಾಗದ ಮತ್ತು ಕಾನೂನಿನ ಅನುಮೋದನೆಯಿಲ್ಲದ ಸಂದರ್ಭಗಳಲ್ಲಿ ಅದನ್ನು ಹಾಡಲಾಗುತ್ತಿದೆ. ವಂದೇ ಮಾತರಂ ಅನ್ನು ನುಡಿಸಿದಾಗ/ಹಾಡಿದಾಗ ಗೌರವವನ್ನು ತೋರಿಸುವುದು ಪ್ರತಿ ಭಾರತೀಯನ ಕರ್ತವ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸ್ವಾತಂತ್ರ ಆಂದೋಲನದ ಸಂದರ್ಭದಲ್ಲಿ ಭಾರತವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರವನ್ನು ಗಳಿಸಿದಾಗ ವಂದೇ ಮಾತರಂ ಇಡೀ ರಾಷ್ಟ್ರದ ಚಿಂತನೆ ಮತ್ತು ಧ್ಯೇಯವಾಗಿತ್ತು. ಆರಂಭದಲ್ಲಿ ದೊಡ್ಡ ನಗರಗಳಲ್ಲಿ ನಡೆದಿದ್ದ ಬೃಹತ್ ರ್ಯಾಲಿಗಳು ವಂದೇ ಮಾತರಂ ಘೋಷಣೆಯನ್ನು ಕೂಗುವ ಮೂಲಕ ದೇಶಭಕ್ತಿಯ ಉತ್ಸಾಹವನ್ನು ಪಡೆದುಕೊಳ್ಳುತ್ತಿದ್ದವು. ಪ್ರಚೋದಿತ ಜನಸಮೂಹದಿಂದ ಸಂಭವನೀಯ ಅಪಾಯದ ಬಗ್ಗೆ ಭೀತಿಗೊಂಡಿದ್ದ ಬ್ರಿಟಿಷರು ಒಂದು ಕಾಲಘಟ್ಟದಲ್ಲಿ ಸಾರ್ವಜನಿಕವಾಗಿ ವಂದೇ ಮಾತರಂ ಉಚ್ಚರಿಸುವುದನ್ನು ನಿಷೇಧಿಸಿದ್ದರು ಮತ್ತು ಇದನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಸ್ವಾತಂತ್ರ ಹೋರಾಟಗಾರರನ್ನು ಜೈಲಿಗೆ ತಳ್ಳಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ. 1896ರ ಕಲಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಮೊದಲ ಬಾರಿ ವಂದೇ ಮಾತರಂ ಗೀತೆಯನ್ನು ಹಾಡಿದ್ದರು.







