ಚಿಕ್ಕಮಗಳೂರು: ಮಗನ ಪಬ್-ಜಿ ಆಟದ ಹುಚ್ಚಿಗೆ ತಾಯಿ ಬಲಿ, ತಂದೆಯ ಬಂಧನ

Photo Credit: PUBG
ಚಿಕ್ಕಮಗಳೂರು, ಮೇ 25: ಮಗನ ಪಬ್ ಜಿ ಆಟದ ಹುಚ್ಚು ತಾಯಿಯನ್ನೇ ಬಲಿ ಪಡೆದುಕೊಂಡ ಧಾರುಣ ಘಟನೆಯೊಂದು ತಾಲೂಕಿನ ಹಾಗಲಖಾನ್ ಎಸ್ಟೇಟ್ ಎಂಬಲ್ಲಿ ಮಂಗಳವಾರ ರಾತ್ರಿ ವರದಿಯಾಗಿದೆ.
ಇಮ್ತಿಯಾಜ್ ಹಾಗೂ ಮೈಮುನಾ ದಂಪತಿ ಹಾಗಲಖಾನ್ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು, ದಂಪತಿಯ ಅಪ್ರಾಪ್ತ ವಯಸ್ಸಿನ ಬಾಲಕ ಯಾವಾಗಲೂ ಮೊಬೈಲ್ನಲ್ಲಿ ಪಬ್ ಜಿ ವಿಡಿಯೋ ಗೇಮ್ ಆಡುತ್ತಿದ್ದ. ಪಬ್ ಜಿ ಆಡದಂತೆ ತಂದೆ ಇಮ್ತಿಯಾಜ್ ಮಗನಿಗೆ ಅನೇಕ ಬಾರೀ ಬುದ್ಧಿ ಹೇಳಿದ್ದರೂ ಮಗ ಪಬ್ ಜಿ ಆಟ ಆಡುವುದನ್ನು ನಿಲ್ಲಿಸಿರಲಿಲ್ಲ ಎಂದು ಹೇಳಲಾಗಿದೆ.
ಮಂಗಳವಾರ ಸಂಜೆ ಇಮ್ತಿಯಾಝ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಈ ವೇಳೆ ಮಗ ಪಬ್ ಜಿ ಆಡುತ್ತಿದ್ದುದನ್ನು ಕಂಡು ಕೋಪಗೊಂಡಿದ್ದಾರೆ. ಈ ವೇಳೆ ಅಪ್ಪ- ಮಗನ ನಡುವೆ ಜಗಳವಾಗಿದೆ. ಇದರಿಂದ ಸಿಟ್ಟಿಗೆದ್ದ ಇಮ್ತಿಯಾಝ್ ಮಗನಿಗೆ ನಾಡ ಬಂದೂಕು ತೋರಿಸಿ ಕೊಲ್ಲುವುದಾಗಿ ಹೆದರಿಸಿದ್ದಾನೆ. ಈ ವೇಳೆ ಇಮ್ತಿಯಾಝ್ ಅವರ ಪತ್ನಿ ಅಡ್ಡ ಬಂದು ಪತಿಯೊಂದಿಗೆ ಜಗಳ ಆಡಿ ಬಂದೂಕನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಇಮ್ತಿಯಾಝ್ ಗುಂಡು ಹಾರಿಸಿದ್ದಾನೆ. ಗುಂಡು ಮಗನಿಗೆ ತಗಲುತ್ತದೆಂದು ತಾಯಿ ಮೈಮುನಾ(40) ಮಗನಿಗೆ ಅಡ್ಡ ಬಂದ ಪರಿಣಾಮ ಬಂದೂಕಿನ ಗುಂಡು ಮೈಮುನಾ ದೇಹ ಹೊಕ್ಕಿದೆ. ಕೂಡಲೇ ಮೈಮುನಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಆರೋಪಿ ಇಮ್ತಿಯಾಝ್ ನನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಡಿ.ಟಿ.ಪ್ರಭು, ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







