ಮಕ್ಕಳಿಗೆ ಪರ್ಯಾಯ ಪಠ್ಯ ಪುಸ್ತಕ ತಯಾರಿಸುತ್ತೇವೆ: ದೇವನೂರು ಮಹಾದೇವ

ದೇವನೂರು ಮಹಾದೇವ
ಮೈಸೂರು: 'ಆರೆಸ್ಸೆಸ್ ಸರ್ಕಾರ ಶಾಲಾ ಮಕ್ಕಳಿಗೆ ಏನು ಕಲಿಸಬೇಕೊ ಕಲಿಸಲಿ ನಾವು ಪರ್ಯಾಯವಾಗಿ ಸಂವಿಧಾನದ ಪೀಠಿಕೆ, ಆಶಯಗಳು ಸೇರಿದಂತೆ ಅನೇಕ ವಿಚಾರಗಳನ್ನು ತಿಳಿಸುವ ಕೆಲಸ ಮಾಡುತ್ತೇವೆ' ಎಂದು ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ದೇವನೂರು ಮಹಾದೇವ ಆಕ್ರೋಶ ವ್ಯಕ್ತಪಡಸಿದ್ದಾರೆ.
ನಗರದಲ್ಲಿ ಬುಧವಾರ ಪಠ್ಯ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆಯಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು, ಮಕ್ಕಳು ಪ್ರಜಾಸತ್ತಾತ್ಮಕವಾಗಿ ಬೆಳೆಯಲು, ಸಂವಿಧಾನದ ಆಶಯಗಳನ್ನು ತಿಳಿಯಲು ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಮಕ್ಕಳು ಈಗಾಗಲೇ ಬಳಸುತ್ತಿರುವ ವ್ಯಾಟ್ಸಾಪ್, ಫೇಸ್ಬುಕ್ ಮೂಲಕ ಪಠ್ಯ ಪರಿಷ್ಕರಣೆಯಲ್ಲಾಗಿರುವ ತಪ್ಪುಗಳನ್ನು ಸರಿಪಡಿಸುತ್ತೇವೆ. ಸಂವಿಧಾನದ ಪ್ರಸ್ತಾವನೆಯನ್ನು ಹಾಡು ಕಟ್ಟಿ ಹಾಡಲಿದ್ದೇವೆ. ತಜ್ಞರ ಮೂಲಕ ಉಪನ್ಯಾಸ ಏರ್ಪಡಿಸುತ್ತೇವೆ. ಕಮ್ಮಟ ಮಾಡಿ ಪ್ರಶ್ನಿಸುವ, ವೈಜ್ಞಾನಿಕ ಮನೋಭಾವ ಬೆಳೆಸಲಿದ್ದೇವೆ ಎಂದು ನುಡಿದರು.
'ತನ್ನ ಪಠ್ಯವನ್ನು ಕೈ ಬಿಡುವಂತೆ ತಿಳಿಸಿದ್ದೇನೆ. ಪಠ್ಯ ಪುಸ್ತಕ ಈಗಾಗಲೇ ಮಕ್ಕಳ ಕೈ ಸೇರಿದ್ದರೆ ಬೋಧಿಸದಂತೆ ಶಿಕ್ಷಕರಿಗೆ ಸೂಚಿಸಬೇಕು' ಎಂದರು.
ದೇವನೂರು ಮಹಾದೇವ ಅವರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಅವರನ್ನು ಯಾರು ದಾರಿ ತಪ್ಪಿಸಿದ್ದಾರೆ? ನಾಗಾಪುರ ಸಂಘ ಪರಿವಾರ ದಾರಿ ತಪ್ಪಿಸಿದೆಯೇ? ಅವರನ್ನು ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ಅವರ ಹತ್ತಿರ ಅಧಿಕಾರ ಇದೆ. ಕುರುಡರಾಗಿದ್ದಾರೆ. ಕುರುಡ ಎತ್ತಗಬೇಕಾದರೂ ಢಿಕ್ಕಿ ಹೊಡೆಯಬಹುದು. ಇರಲಿ, ಅವರು ಮಾಡುವುದು ಮಾಡಲಿ, ಮಕ್ಕಳು ಮೂಢ ನಂಬಿಕೆಗೆ ಬೀಳದಂತೆ, ಪ್ರಶ್ನಿಸುವ ಮನೋಭಾವ ಬೆಳೆಸಲು ಪರ್ಯಾಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮ ರೂಪಿಸಲಿದ್ದೇವೆ ಎಂದರು.







