ಉಡುಪಿ: ಹಿರಿಯಡ್ಕದಲ್ಲಿ ಮೇ 28-29ರಂದು ಹಲಸಿನ ಮೇಳ
ಉಡುಪಿ : ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯುವ ಹಲಸಿನ ಹಣ್ಣಿನ ಬೆಳೆಯ ಕುರಿತು ಜನರಿಗೆ ಸಮಗ್ರ ಮಾಹಿತಿ ನೀಡಲು, ಅದರ ಉತ್ಪಾದನಾ ತಾಂತ್ರಿಕತೆ, ಹಲಸಿನ ಹಣ್ಣಿನ ಮೌಲ್ಯವರ್ಧನೆ, ಹಲಸಿನ ಖಾದ್ಯ ಪದಾರ್ಥಗಳ ವೈವಿಧ್ಯತೆಯ ಕುರಿತು ತಿಳಿಸಲು ಇದೇ ಮೇ ೨೮ ಮತ್ತು ೨೯ರಂದು ಹಿರಿಯಡ್ಕ ದಲ್ಲಿ ಎರಡು ದಿನಗಳ ಕಾಲ ‘ಹಲಸಿನ ಮೇಳ-೨೦೨೨’ನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲಸು ಮೇಳದ ಕುರಿತು ಸಮಗ್ರ ಮಾಹಿತಿಯನ್ನು ಹಂಚಿಕೊಂಡರು. ಜಿಲ್ಲಾ ತೋಟಗಾರಿಕಾ ಇಲಾಖೆ, ಜಿಲ್ಲಾ ಕೃಷಿಕ ಸಂಘ ಉಡುಪಿ, ಬೊಮ್ಮರ ಬೆಟ್ಟು ಗ್ರಾಪಂ ಹಿರಿಯಡ್ಕ, ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿವಿ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಉಡುಪಿ, ಪಳ್ಳಿ ಶ್ರೀನಿವಾಸ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಹಿರಿಯಡ್ಕ ಹಾಗೂ ನವ್ಯೋದಯ ಫ್ರೆಂಡ್ಸ್ ಕ್ಲಬ್ ಮತ್ತು ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ ಹಲಸಿನ ಮೇಳ-೨೦೨೨ ನಡೆಯಲಿದೆ ಎಂದರು.
ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಸಭಾಭವನ ದಲ್ಲಿ ನಡೆಯಲಿರುವ ಈ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ ೨೮ರಂದು ಬೆಳಗ್ಗೆ ೧೦:೩೦ಕ್ಕೆ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಹಾಗೂ ವಸ್ತು ಪ್ರದರ್ಶನ ವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದು, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯ ಕುಲಪತಿ ಡಾ.ಎಂ. ಹನುಮಂತಪ್ಪ, ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಸರಗೋಡಿನ ಪ್ರಗತಿಪರ ಕೃಷಿಕ ಡಾ.ಡಿ. ಚಂದ್ರಶೇಖರ್ ಚೌಟ, ಉದ್ಯಮಿ ಪಳ್ಳಿ ನಟರಾಜ್ ಹೆಗಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಸಿಇಓ ಪ್ರಸನ್ನ ಹೆಚ್, ಉಡುಪಿ ತಹಶೀಲ್ದಾರ್ ಡಿ.ಅರ್ಚನಾ ಭಟ್, ಉಡುಪಿ ತಾಪಂ ಇಒ ವಿವೇಕಾನಂದ ಗಾಂವಕರ್ ಹಾಗೂ ಇತರರು ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ತಾಂತ್ರಿಕ ಸಮಾವೇಶಗಳನ್ನು ನಡೆಯಲಿದ್ದು, ವಿಷಯತಜ್ಞರು, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು, ಪ್ರಗತಿಪರ ಕೃಷಿಕರು ಹಾಗೂ ನಾಡಿನ ಹಲಸು ಬೆಳೆಗಾರರು ಹಲಸು ಬೆಳೆಯ ಉತ್ಪಾದನಾ ತಾಂತ್ರಿಕತೆಗಳು, ಮೌಲ್ಯವರ್ಧನೆ ಹಾಗೂ ಹಲಸಿನ ಖಾದ್ಯ ಪದಾರ್ಥಗಳ ತಯಾರಿಕೆಯ ಪ್ರಾತ್ಯ ಕ್ಷಿಕಯನ್ನು ನಡೆಸಿಕೊಡಲಿದ್ದಾರೆ ಎಂದು ಡಾ. ಲಕ್ಷ್ಮಣ್ ತಿಳಿಸಿದರು.
ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪರಕ ಡಾ. ಜಿ.ಎಸ್.ಕೆ.ಸ್ವಾಮಿ, ಡಾ.ಕಾಂತರಾಜ್ ರೈ, ಚಿಕ್ಕಮಗಳೂರು ಜಿಲ್ಲೆ ಸಖರಾಯ ಪಟ್ಟಣದ ಶಿವಣ್ಣ, ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ, ಕೊಪ್ಪದ ಸುಮಾ ರಂಗಪ್ಪ ಮುಂತಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಮೇ 29ರ ರವಿವಾರ ಅಪರಾಹ್ನ ೨:೦೦ರಿಂದ ಹಲಸಿನ ಖಾದ್ಯ ಪದಾರ್ಥಗಳ ತಯಾರಿಕೆಯ ಕುರಿತು ಪ್ರಾತ್ಯಕ್ಷಿಕೆ ಯನ್ನು ಕೊಪ್ಪದ ಪ್ರಗತಿಪರ ಕೃಷಿಕರಾದ ಸುಮಾ ರಂಗಪ್ಪ ನಡೆಸಿಕೊಡಲಿದ್ದಾರೆ. ಇದರೊಂದಿಗೆ ಮೇಳದಲ್ಲಿ ಸುಮಾರು 100ರಷ್ಟು ಮಳಿಗೆಗಳು ಇದ್ದು, ಇಲ್ಲಿ ನಾಡಿನ ವೈವಿದ್ಯಮಯ ಹಲಸಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.
ಕರಾವಳಿಯಿಂದ 10 ಟನ್ ಹಾಗೂ ಹೊರ ಜಿಲ್ಲೆಗಳಿಂದ ೧೦ ಟನ್ ಸೇರಿದಂತೆ ಸುಮಾರು ೨೦ ಟನ್ ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಾಗುವುದು. ರಿಪ್ಪನ್‌ಪೇಟೆಯಿಂದ ಎಂಟು ಕ್ವಿಂಟಾಲ್ ಹಣ್ಣು ಬರಲಿದೆ. ಸಿದ್ಧು ಹಲಸು, ರುದ್ರಾಕ್ಷಿ, ಗಮ್‌ಲೆಸ್ ಹಲಸು ಸೇರಿದಂತೆ ಕರಾವಳಿಯ ಇಂಬ, ಬಕ್ಕೆ ತಳಿಯ ಹಲಸುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇರುತ್ತವೆ ಎಂದು ಡಾ.ಲಕ್ಷ್ಮಣ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ. ಧನಂಜಯ, ಬ್ರಹ್ಮಾವರ ಕೃಷಿ ಡಿಪ್ಲೋಮ ಕಾಲೇಜಿನ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಕೆ.ವಿ. ಹಾಗೂ ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಸುರೇಶ್ ನಾಯಕ್ ಉಪಸ್ಥಿತರಿದ್ದರು.