‘ಯೆನೆಪೊಯ ಕ್ಯಾಂಪಸ್‌ನ ಸಸ್ಯ ಮತ್ತು ಪ್ರಾಣಿಗಳು’ ಕೃತಿ ಬಿಡುಗಡೆ

ಮಂಗಳೂರು: ‘ಯೆನೆಪೊಯ ಕ್ಯಾಂಪಸ್‌ನ ಸಸ್ಯ ಮತ್ತು ಪ್ರಾಣಿಗಳು’ ಎಂಬ ಶೀರ್ಷಿಕೆಯಡಿ ಪ್ರಕಟಿಸಲಾದ ಕೃತಿಯನ್ನು ಸೋಮವಾರ ಕ್ಯಾಂಪಸ್‌ನಲ್ಲಿ ಉಪಕುಲಪತಿ ಡಾ. ಎಂ. ಜಯಕುಮಾರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ಆರಂಭದಿಂದಲೂ ಯೆನೆಪೊಯ ಸಂಸ್ಥೆಗಳು ಪರಿಸರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯನ್ನು ನೀಡಿವೆ. ಹಸಿರು ಕ್ಯಾಂಪಸ್ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಸಕ್ತ ಕಾಲಘಟ್ಟದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಅಗತ್ಯವಿದೆ. ಈ ಕೃತಿಯು ಯೆನೆಪೊಯ ವಿವಿ ಕ್ಯಾಂಪಸ್‌ನಲ್ಲಿ ಕಂಡುಬರುವ ಜೀವವೈವಿಧ್ಯತೆಯ ಮೌಲ್ಯಯುತ ದಾಖಲಾತಿಯಾಗಿದೆ ಎಂದರು.
ಸಂಪಾದಕಿ ಡಾ.ಭಾಗ್ಯಾ ಬಿ. ಶರ್ಮಾ ಕೃತಿಯನ್ನು ಪರಿಚಯಿಸಿದರು.
ದೇರಳಕಟ್ಟೆಯಲ್ಲಿರುವ ಯೆನೆಪೊಯ ವಿಶ್ವವಿದ್ಯಾನಿಲಯದ 27 ಎಕರೆ ಕ್ಯಾಂಪಸ್‌ನಲ್ಲಿ ಏಳು ವರ್ಷಗಳ ಕಾಲ ನಡೆಸಿದ ಅಧ್ಯಯನದ ಫಲವಾಗಿ ೧೩೫ ಸಸ್ಯ ಪ್ರಭೇದಗಳು ಮತ್ತು ೧೭೩ ಪ್ರಾಣಿ ಪ್ರಭೇದಗಳ ಫೋಟೋಗಳು ಮತ್ತು ವಿವರಣೆಗಳನ್ನು ಪುಸ್ತಕ ದಾಖಲಿಸಿದೆ. ಕರ್ನಾಟಕ ಜೀವವೈಧ್ಯ ಮಂಡಳಿಯ ಮಾಜಿ ನಿರ್ದೇಶಕ ಹಾಗೂ ಪರಿಸರವಾದಿ ಅನಂತ ಹೆಗಡೆ ಅಶೀಸರ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಕ್ಯಾಂಪಸ್‌ನ ಸಸ್ಯ ವೈವಿಧ್ಯತೆಯ ಲೆಕ್ಕಪರಿಶೋಧನೆ ನಡೆಸಿದ ಖ್ಯಾತ ವರ್ಗೀಕರಣ ಶಾಸ್ತ್ರಜ್ಞ (ಟ್ಯಾಕ್ಸಾನಮಿಸ್ಟ್) ದಿ. ಪ್ರೊ.ಗೋಪಾಲಕೃಷ್ಣ ಭಟ್ ಅವರ ಸ್ಮರಣಾರ್ಥ ಪುಸ್ತಕವನ್ನು ಸಮರ್ಪಿಸಲಾಗಿದೆ. ಪ್ರಾಣಿಶಾಸ್ತ್ರಜ್ಞ ಡಾ. ದೀಪಕ್ ಮತ್ತು ವಿವೇಕ್ ವಿವಿಧ ಪ್ರಾಣಿ ಪ್ರಭೇದಗಳಾದ ಹುಳುಗಳು, ಜೇಡಗಳು, ಹಾವುಗಳು, ಚಿಟ್ಟೆಗಳು ಮತ್ತು ಸಸ್ತನಿಗಳನ್ನು ದಾಖಲಿಸಿದ್ದಾರೆ. ಕಾರ್ಕಳದ ವೈದ್ಯಾಧಿಕಾರಿ ಡಾ. ಪ್ರಸಾದ್ ಕಿಣಿ ಮತ್ತು ನೇತ್ರ ತಜ್ಞೆ ಡಾ.ಉಮಾ ಕುಲಕರ್ಣಿ ಕ್ಯಾಂಪಸ್‌ನಲ್ಲಿ ಚಿತ್ರೀಕರಿಸಲಾದ ಪಕ್ಷಿಗಳ ಛಾಯಾಚಿತ್ರಗಳನ್ನು ಈ ಪುಸ್ತಕಕ್ಕೆ ನೀಡಿದ್ದಾರೆ.
ಕಣ್ಣೂರು ಮತ್ತು ಕಲ್ಲಿಕೋಟೆ ವಿವಿಯ ಉಪಕುಲಪತಿ ಡಾ.ಶ್ರೀಪತಿ ರಾವ್, ಪ್ರೊ.ಅಬ್ದುಲ್ ರಹ್ಮಾನ್, ರಿಜಿಸ್ಟ್ರಾರ್ ಡಾ.ಗಂಗಾಧರ ಸೋಮಯಾಜಿ, ಯೆನೆಪೊಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಅಖ್ತರ್ ಹುಸೇನ್, ಯೆನೆಪೊಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಗುಲ್ಜಾರ್ ಅಹ್ಮದ್ ಉಪಸ್ಥಿತರಿದ್ದರು.








