ಪಾಕಿಸ್ತಾನ: ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ; ಪೊಲೀಸರಿಂದ ಅಶ್ರುವಾಯು , ಲಾಠಿಚಾರ್ಜ್ ಪ್ರಯೋಗ
ಇಸ್ಲಮಾಬಾದ್, ಮೇ 25: ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್‌ಖಾನ್ ಬೆಂಬಲಿಗರು ಬುಧವಾರ ಹಮ್ಮಿಕೊಂಡಿದ್ದ ಇಸ್ಲಮಾಬಾದ್ ಜಾಥಾವನ್ನು ತಡೆದ ಪೊಲೀಸರು ಅಶ್ರುವಾಯು ಮತ್ತು ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸರಕಾರವನ್ನು ವಿಸರ್ಜಿಸಿ ಹೊಸ ಚುನಾವಣೆ ಘೋಷಿಸುವವರೆಗೆ ರಾಜಧಾನಿಯಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಇಮ್ರಾನ್ಖಾನ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದರು. ವಾಯವ್ಯ ಪ್ರಾಂತದ ನಗರ ಪೇಷಾವರದಲ್ಲಿ ಜಾಥಾಕ್ಕೆ ಇಮ್ರಾನ್‌ಖಾನ್ ಚಾಲನೆ ನೀಡಿದ್ದರು.
ಜಿ.ಟಿ ರಸ್ತೆಯ ಮೂಲಕ ಇಸ್ಲಮಾಬಾದ್ ಗೆ ಜಾಥಾ ತೆರಳಲಿದೆ ಎಂದು ಇಮ್ರಾನ್ ಘೋಷಿಸಿದ್ದರು. ಆದರೆ , ಇಮ್ರಾನ್ ದುಷ್ಟ ಯೋಜನೆಯೊಂದಿಗೆ ತನ್ನ ಬೆಂಬಲಿಗರನ್ನು ಇಸ್ಲಮಾಬಾದ್ ಗೆ ಕರೆತರುತ್ತಿದ್ದಾರೆ ಎಂದು ಹೇಳಿದ್ದ ಸರಕಾರ ಜಾಥಾ ಇಸ್ಲಮಾಬಾದ್ ಪ್ರವೇಶಿಸುವುದನ್ನು ನಿಷೇಧಿಸಿದೆ. ಮಂಗಳವಾರ ಸಂಜೆಯಿಂದಲೇ ಇಸ್ಲಮಾಬಾದ್ ಪ್ರವೇಶಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಪೊಲೀಸ್ ಮತ್ತು ಅರೆಸೇನಾ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದರಲ್ಲಿ ಯಾರೂ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಆಂತರಿಕ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ. ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸುವ ಮತ್ತು ಅವರನ್ನು ಪೊಲೀಸ್ ವ್ಯಾನ್‌ನೊಳಗೆ ತುಂಬಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.