ಆಸ್ಪತ್ರೆಯಲ್ಲಿ ಬೆಂಕಿ ಆಕಸ್ಮಿಕ: 11 ನವಜಾತ ಶಿಶುಗಳು ಸಜೀವ ದಹನ
ಟಿವಾವೋನ್ (ಸೆನೆಗಲ್): ಪಶ್ಚಿಮ ಸೆನೆಗಲ್ನ ಟಿವಾವೋನ್ ನಗರದ ಆಸ್ಪತ್ರೆಯಲ್ಲೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಿಂದ ಹನ್ನೊಂದು ಮಕ್ಕಳು ಸಜೀವ ದಹನವಾಗಿದ್ದಾರೆ ಎಂದು ಅಧ್ಯಕ್ಷ ಮ್ಯಾಕಿ ಸಾಲ್ ಪ್ರಕಟಿಸಿದ್ದಾರೆ.
ಸೆನೆಗಲ್ನಲ್ಲಿ ಮಧ್ಯರಾತ್ರಿಗಿಂತ ಮುನ್ನ ಟ್ವಿಟರ್ ನಲ್ಲಿ ಈ ವಿಷಯವನ್ನು ಅಧ್ಯಕ್ಷರು ಪ್ರಕಟಿಸಿದ್ದು, 11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಹೇಳಿದ್ದಾರೆ.
"ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಹನ್ನೊಂದು ಶಿಶುಗಳು ಮೃತಪಟ್ಟಿವೆ ಎಂದು ತೀವ್ರ ದುಃಖದಿಂದ ಪ್ರಕಟಿಸುತ್ತಿದ್ದೇನೆ" ಎಂದು ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ಅವರ ತಾಯಂದಿರಿಗೆ ಮತ್ತು ಕುಟುಂಬಗಳಿಗೆ ಅಧ್ಯಕ್ಷರು ಸಾಂತ್ವನ ಹೇಳಿದ್ದಾರೆ.
ಮೇಮ್ ಅಬ್ದು ಅಝೀಝ್ ಸೈ ದಬೆಕ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ಇದಕ್ಕೆ ಕಾರಣ ಎಂದು ಸೆನೆಗಲ್ ಪೊಲೀಸರು ಹೇಳಿದ್ದಾರೆ. ಬೆಂಕಿ ಕ್ಷಿಪ್ರವಾಗಿ ಇಡೀ ಕಟ್ಟಡವನ್ನು ವ್ಯಾಪಿಸಿತು ಎಂದು ವಿವರಿಸಿದ್ದಾರೆ.
ಮೂವರು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಮೇಯರ್ ದೆಂಬಾ ದಿಯೋಪ್ ಹೇಳಿದ್ದಾರೆ. ಈ ಆಸ್ಪತ್ರೆ ಇತ್ತೀಚೆಗೆ ಉದ್ಘಾಟನೆಗೊಂಡಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.