ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮಹಾರಾಷ್ಟ್ರ ಸಚಿವರ ಮನೆಯಲ್ಲಿ ಇಡಿ ಶೋಧ

Photo:ANI
ಹೊಸದಿಲ್ಲಿ: ಭೂ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಬೆಳಗ್ಗೆ ಮಹಾರಾಷ್ಟ್ರದ ಸಾರಿಗೆ ಸಚಿವ ಅನಿಲ್ ಪರಬ್ಗೆ ಸಂಬಂಧಿಸಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ತನಿಖಾ ಸಂಸ್ಥೆಯು ಶಿವಸೇನ ನಾಯಕನ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿದ ನಂತರ ಅವರ ನಿವಾಸ ಸೇರಿದಂತೆ ಪುಣೆ, ಮುಂಬೈ ಹಾಗೂ ದಾಪೋಲಿಯಲ್ಲಿ ಏಳು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
2017 ರಲ್ಲಿ ರತ್ನಗಿರಿ ಜಿಲ್ಲೆಯ ದಾಪೋಲಿಯಲ್ಲಿ ಪರಬ್ ಅವರು 1 ಕೋಟಿ ರೂ.ಗೆ ಭೂಮಿಯನ್ನು ಖರೀದಿಸಿದ್ದಾರೆ. ಆದರೆ ಅದನ್ನು 2019ರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧ ಇಡಿ ತನಿಖೆಗೆ ಮುಂದಾಗಿತ್ತು.
ನಂತರ 2020ರಲ್ಲಿ ಮುಂಬೈ ಮೂಲದ ಕೇಬಲ್ ಆಪರೇಟರ್ ಸದಾನಂದ್ ಕದಂ ಎಂಬುವವರಿಗೆ 1.10 ಕೋಟಿ ರೂ.ಗೆ ಭೂಮಿಯನ್ನು ಮಾರಾಟ ಮಾಡಲಾಗಿದ್ದು, 2017-2020ರ ನಡುವೆ ಆ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.