ಇರಾನ್ನ ತೈಲ ಸರಕನ್ನು ವಶಕ್ಕೆ ಪಡೆದ ಅಮೆರಿಕ : ವರದಿ
ಅಥೆನ್ಸ್, ಮೇ 26: ಗ್ರೀಸ್ ಕಡಲತೀರದ ಬಳಿ ರಶ್ಯಾ ನಿರ್ವಹಿಸುವ ಹಡಗಿನಲ್ಲಿದ್ದ ಇರಾನ್ನ ತೈಲ ಸರಕನ್ನು ಅಮೆರಿಕ ವಶಕ್ಕೆ ಪಡೆದು ಮತ್ತೊಂದು ಹಡಗಿನ ಮೂಲಕ ತನ್ನ ದೇಶಕ್ಕೆ ರವಾನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ತಿಂಗಳು ದಕ್ಷಿಣದ ದ್ವೀಪಸಮೂಹ ಎವಿಯಾದ ಬಳಿ ಸಂಚರಿಸುತ್ತಿದ್ದ ಇರಾನ್ನ ಧ್ವಜವನ್ನು ಹೊಂದಿದ್ದ ಪೆಗಾಸ್ ಎಂಬ ಹಡಗನ್ನು ಗ್ರೀಸ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಹಡಗಿನಲ್ಲಿ ರಶ್ಯದ 19 ಸಿಬಂದಿಗಳಿದ್ದರು. ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ವಿಧಿಸಲಾಗಿರುವ ನಿರ್ಬಂಧದ ಕಾರಣ ಹಡಗನ್ನು ವಶಕ್ಕೆ ಪಡೆದಿರುವುದಾಗಿ ಗ್ರೀಸ್ನ ಅಧಿಕಾರಿಗಳು ಹೇಳಿದ್ದರು. ಆದರೆ ಹಡಗಿನ ಮಾಲಕತ್ವದ ವಿಷಯದಲ್ಲಿನ ಗೊಂದಲದ ಕಾರಣ ಹಡಗನ್ನು ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೂ ಈ ಹಡಗು ಗ್ರೀಸ್ನ ಸಮುದ್ರತೀರದಲ್ಲಿ ಲಂಗರು ಹಾಕಿತ್ತು. ಹಡಗಿನಲ್ಲಿ ಇರಾನ್ನ ತೈಲವಿದೆ ಎಂದು ಅಮೆರಿಕದ ನ್ಯಾಯ ಇಲಾಖೆ ಮಾಹಿತಿ ನೀಡಿದ ಬಳಿಕ, ಹಡಗಿನಲ್ಲಿದ್ದ ತೈಲ ಸರಕನ್ನು ಅಮೆರಿಕದ ಹಡಗಿಗೆ ವರ್ಗಾಯಿಸಲಾಗಿದೆ ಎಂದು ಗ್ರೀಸ್ ಸರಕಾರ ಗುರುವಾರ ಹೇಳಿಕೆ ಬಿಡುಗಡೆಗೊಳಿಸಿದೆ.