ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಹೊಸದಿಲ್ಲಿ, ಮೇ 26: ಲೈಂಗಿಕ ಕಾರ್ಯಕರ್ತರ ಮಧ್ಯಪ್ರವೇಶಿಸಬೇಡಿ ಅಥವಾ ಅವರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬೇಡಿ ಎಂದು ತನ್ನ ಮಹತ್ವದ ಆದೇಶವೊಂದರಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ವೇಶ್ಯಾವಾಟಿಕೆ ಒಂದು ವೃತ್ತಿ. ಲೈಂಗಿಕ ಕಾರ್ಯಕರ್ತೆಯರು ಕಾನೂನಿನ ಅಡಿ ಸಮಾನ ರಕ್ಷಣೆ ಹಾಗೂ ಗೌರವ ಪಡೆಯಲು ಅರ್ಹರು ಎಂದು ಅದು ಹೇಳಿದೆ.
ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ಮೂವರು ಸದಸ್ಯರ ಪೀಠ, ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ರಕ್ಷಿಸಲು 6 ನಿರ್ದೇಶನಗಳನ್ನು ನೀಡಿದೆ.
‘‘ಲೈಂಗಿಕ ಕಾರ್ಯಕರ್ತೆಯರು ಕಾನೂನಿನಲ್ಲಿ ಸಮಾನ ರಕ್ಷಣೆ ಪಡೆಯಲು ಅರ್ಹರು. ಪ್ರಾಯ ಹಾಗೂ ಸಮ್ಮತಿಯ ಆಧಾರದ ಮೇಲೆ ಎಲ್ಲ ಪ್ರಕರಣಗಳಲ್ಲಿ ಕ್ರಿಮಿನಲ್ ಕಾನೂನನ್ನು ಸಮಾನವಾಗಿ ಅನ್ವಯಿಸಬೇಕು. ಲೈಂಗಿಕ ಕಾರ್ಯಕರ್ತೆಯರು ವಯಸ್ಕರು ಹಾಗೂ ಸಮ್ಮತಿಯಿಂದ ಭಾಗಿಯಾಗಿದ್ದಾರೆ ಎಂದು ಸ್ಪಷ್ಟವಾದರೆ, ಪೊಲೀಸರು ಮಧ್ಯಪ್ರವೇಶಿಸಬಾರದು ಹಾಗೂ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬಾರದು. ಸಂವಿಧಾನದ 21ನೇ ಕಲಂ ಅಡಿಯಲ್ಲಿ ದೇಶದಲ್ಲಿ ಪ್ರತಿಯೊಬ್ಬರಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ’’ ಎಂದು ಹೇಳಿದೆ.
ಸ್ವಯಂಪ್ರೇರಿತ ಲೈಂಗಿಕ ಕಾರ್ಯ ಕಾನೂನು ಬಾಹಿರವಲ್ಲ. ಆದುದರಿಂದ ಅವರನ್ನು ಬಂಧಿಸಬಾರದು, ದಂಡ ವಿಧಿಸಬಾರದು, ಕಿರುಕುಳ ನೀಡಬಾರದು ಅಥವಾ ವೇಶ್ಯಾವಾಟಿಕೆಯ ಮೇಲೆ ದಾಳಿ ನಡೆಸುವ ಸಂದರ್ಭ ಅವರನ್ನು ಬಲಿಪಶುಗಳನ್ನಾಗಿ ಮಾಡಬಾರದು. ಆದರೆ, ವೇಶ್ಯಾವಾಟಿಕೆ ನಡೆಸುವುದು ಕಾನೂನು ಬಾಹಿರ ಎಂದು ಪೀಠ ಹೇಳಿದೆ.