ಅಬುಧಾಬಿ: ಹೋಟೆಲ್‌ನಲ್ಲಿ ಸ್ಫೋಟ ಪ್ರಕರಣ; ಮೃತಪಟ್ಟವರಲ್ಲಿ ಓರ್ವ ಭಾರತೀಯ

ದುಬೈ, ಮೇ 26: ಸೋಮವಾರ (ಮೇ 23) ಅಬುಧಾಬಿಯ ಹೋಟೆಲ್‌ನಲ್ಲಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟ ಇಬ್ಬರಲ್ಲಿ ಒಬ್ಬ ಭಾರತೀಯ ಪ್ರಜೆ, ಮತ್ತೊಬ್ಬ ಪಾಕಿಸ್ತಾನದ ಪ್ರಜೆಯಾಗಿದ್ದಾನೆ. 106 ಭಾರತೀಯರ ಸಹಿತ 120 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಸೋಮವಾರ ಮಧ್ಯಾಹ್ನ ಅಬುಧಾಬಿಯ ರೆಸ್ಟಾರೆಂಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದಾಗ ಭಾರತ ಮತ್ತು ಪಾಕಿಸ್ತಾನದ ನಾಗರಿಕರು ಮೃತಪಟ್ಟಿದ್ದಾರೆ. 106 ಭಾರತೀಯರ ಸಹಿತ ಇತರ 120 ಮಂದಿ ಗಾಯಗೊಂಡಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಮೃತಪಟ್ಟವರಲ್ಲಿ ಒಬ್ಬ ಭಾರತೀಯ ಪ್ರಜೆ ಎಂಬುದನ್ನು ಭಾರತದ ರಾಯಭಾರ ಕಚೇರಿಯೂ ದೃಢಪಡಿಸಿದೆ.
ಮೃತದೇಹವವನ್ನು ಶೀಘ್ರ ಸ್ವದೇಶಕ್ಕೆ ತರುವ ನಿಟ್ಟಿನಲ್ಲಿ ರಾಯಭಾರ ಕಚೇರಿಯು ಸ್ಥಳೀಯಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ಯುಎಇ ಅಧಿಕಾರಿಗಳು ನೆರವಿನ ಭರವಸೆ ನೀಡಿದ್ದಾರೆ. ಮೃತರ ಕುಟುಂಬವನ್ನು ಸಂಪರ್ಕಿಸಿದ್ದು ತ್ವರಿತ ರೀತಿಯಲ್ಲಿ ಎಲ್ಲಾ ಸಹಾಯವನ್ನೂ ಒದಗಿಸಲಾಗುತ್ತಿದೆ. ಅಲ್ಲದೆ ಎಮಿರೇಟ್‌ನ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಭಾರತದ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.







